ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಆಹಾರ ಸರಪಳಿಯ ಕೊಂಡಿಯಲ್ಲಿ ಪ್ರತೀ ಜೀವಿಯೂ ಬಹುಮುಖ್ಯವಾಗಿದೆ, ಇಲ್ಲವಾದಲ್ಲಿ ಸಮತೋಲನ ಏರುಪೇರಾಗುತ್ತದೆ ಎಂದು ಭದ್ರ ಹುಲಿ ಸಂರಕ್ಷಿತ ಪ್ರದೇಶ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸಂತೋಷ್ ಸಾಗರ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾನಿಲಯದ #Kuvempu University ವನ್ಯಜೀವಿ ಮತ್ತು ನಿರ್ವಹಣಾ ಅಧ್ಯಯನ ವಿಭಾಗ ಮತ್ತು ಭದ್ರ ಹುಲಿ ಸಂರಕ್ಷಿತ ಪ್ರದೇಶ ಚಿಕ್ಕಮಗಳೂರು ಮತ್ತು ಕರ್ನಾಟಕ ಪರಿಸರ ಪ್ರವಾಸೋಧ್ಯಮ ಅಭಿವೃದ್ಧಿ ಮಂಡಳಿ ಬೆಂಗಳೂರು ಇವರುಗಳ ಜಂಟಿ ಸಹಯೋಗದಲ್ಲಿ ವಿವಿಯ ವನ್ಯಜೀವಿ ಮತ್ತು ನಿರ್ವಹಣಾ ಅಧ್ಯಯನ ವಿಭಾಗದಲ್ಲಿ ಸೆ.3-6ರವರೆಗೆ ಆಯೋಜಿಸಲಾಗಿದ್ದ ನಿಸರ್ಗ ತಜ್ಞರ ತರಬೇತಿ ಕಾರ್ಯಕ್ರಮ (Certified Naturalist Training Program) ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ರೀತಿಯ ಜೀವಿಗಳನ್ನು ಹಾಗೂ ಪ್ರಕೃತಿಯೊಂದಿಗಿನ ಅವುಗಳ ಹೊಂದಾಣಿಕೆಯನ್ನು ನೋಡುತ್ತೇವೆ. ಹಾಗೆಯೇ ಪ್ರತಿಯೊಂದು ಜೀವಿಯೂ ಆಹಾರ ಸರಪಳಿಯಲ್ಲಿ ಅದರದ್ದೇ ಆದ ಬಹುಮುಖ್ಯ ಪಾತ್ರ ವಹಿಸುತ್ತವೆ. ಆಯಾ ಸರಪಳಿಯಲ್ಲಿ ಒಂದು ಕೊಂಡಿ ಕಳೆದರೂ ಪ್ರಕೃತಿಯ ಸಮತೋಲನದಲ್ಲಿ ಏರುಪೇರಾಗುತ್ತದೆ. ಅಂತೆಯೇ ಎಲ್ಲಾ ಜೀವಿಗಳ ಬಗ್ಗೆ ಅರಿತು ಅವುಗಳ ಬಗ್ಗೆ ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವುದು ಬಹುಮುಖ್ಯ ಎಂದರು.
Also read: ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಮಹಿಳೆ ಆಯ್ಕೆ ಸಂತೋಷದ ವಿಷಯ: ನಾಗವೇಣಿ
ದೇಶದ ಮುಂದಿನ ಪ್ರಜೆಗಳಾದ ನೀವು ಪರಿಸರದ ವಿವಿಧ ಜೀವಿಗಳ ಬಗ್ಗೆ ಅರಿತು ನಿಮ್ಮ ಸುತ್ತಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು. 2015ರಿಂದ ಪ್ರಾರಂಭವಾದ ಗಾಡ್ಗಿಲ್ ವರದಿಯು ಪಶ್ಚಿಮ ಘಟ್ಟಗಳನ್ನೂ ೩ ಭಾಗಗಳನ್ನಾಗಿ ಮಾಡಿ ಅದರ ಉಳಿವಿಗೆ ಸಹಕರಿಸುತ್ತ ಬಂದಿದೆ ಎಂದು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ ಶರತ್ ಅನಂತಮೂರ್ತಿ ಮತ್ತು ಕುಲಸಚಿವರಾದ ಎ. ಎಲ್. ಮಂಜುನಾಥ್ ತರಬೇತಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಭಾಗದ ಅಧ್ಯಕ್ಷ ಪ್ರೊ. ವಿಜಯ ಕುಮಾರ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕಿರಣ್ ಬಾಗಡೆ ಶ್ರೀನಿವಾಸ ಮತ್ತು ಕರ್ನಾಟಕ ಪರಿಸರ ಪ್ರವಾಸೋಧ್ಯಮ ಅಭಿವೃದ್ಧಿ ಮಂಡಳಿಯ ರಾಹುಲ್ ಆರಾಧ್ಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರುಗಳಾದ, ಡಾ.. ಹರೀಶ ಎಂ. ಎನ್, ಡಾ. ರಾಘವೇಂದ್ರ ಗೌಡ ಹೆಚ್. ಟಿ, ಡಾ. ಪ್ರಮೋದ್. ಎ. ಎಫ್, ಸೌಮ್ಯ ಜಿ. ಆರ್ ಮತ್ತು ರೂಪ. ಸಿ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದ ಶಿಭಿರಾರ್ಥಿಗಳಾಗಿ ವನ್ಯಜೀವಿ ಮತ್ತು ನಿರ್ವಹಣೆ ವಿಭಾಗದ 56 ವಿದ್ಯಾರ್ಥಿಗಳು ಹಾಗು ಕರ್ನಾಟಕ ಅರಣ್ಯ ಇಲಾಖೆಯ 15 ಜನ ಸಿಬ್ಬ್ಬಂದಿ ವರ್ಗದವರು ಭಾಗವಹಿಸಿದ್ದಾರೆ. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ರಾಘವೇಂದ್ರ ಗೌಡ ಹೆಚ್. ಟಿ ಮಾಡಿದರು ಹಾಗು ಕುಮಾರಿ ಸಿಂಚನ. ಜೆ ಮತ್ತು ಕುಮಾರಿ ಪೂಜಾ ಎನ್. ಎಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post