ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಿನ್ನೆ ಕಬಡ್ಡಿ ಪಂದ್ಯಾವಳಿಯ ಫೈನಲ್ಸ್ ವೇಳೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ನಾಯಕರ ನೇತೃತ್ವದಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬಸವೇಶ್ವರ ವೃತ್ತದಿಂದ ತಾಲೂಕು ಕಚೇರಿವರೆಗೂ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಬೃಹತ್ ಪ್ರತಿಭಟನೆ ತಾಲೂಕು ಕಚೇರಿ ಬಳಿಯಲ್ಲಿ ಅಂತ್ಯವಾಗಿ, ಅಲ್ಲಿ ಪ್ರತಿಭಟನಾ ಧರಣೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರಮುಖರು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಭದ್ರಾವತಿ ತಾಲ್ಲೂಕು ಶಾಸಕರಾದ ಬಿ.ಕೆ. ಸಂಗಮೇಶ್ವರ ಕುಟುಂಬಸ್ಥರು ಹಾಗೂ ಬೆಂಬಲಿಗರು ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ ವಿಚಾರ. ಇಂತಹ ಗೂಂಡಾ ಸಂಸ್ಕೃತಿಯನ್ನು ನಾಗರಿಕ ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ರೀತಿಯ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ಬೇರೆ ಸಣ್ಣಪುಟ್ಟ ಹುಡುಗರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಘಟನೆಯಲ್ಲಿ ಪ್ರಮುಖರಾದ ಶಾಸಕರ ಪುತ್ರ ಹಾಗೂ ಕುಟುಂಬಸ್ಥರ ವಿರುದ್ಧ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಂ.ಬಿ. ಭಾನುಪ್ರಕಾಶ್, ಎಸ್. ದತ್ತಾತ್ರಿ, ಚನ್ನಬಸಪ್ಪ, ಮಾಲತೇಶ್, ಕೆ.ವಿ. ಅಣ್ಣಪ್ಪ ಸೇರಿದಂತೆ ಜಿಲ್ಲಾ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಬಿಜೆಪಿ, ಬಜರಂಗದಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನಾ ಮೆರವಣಿಗೆಗೂ ಮುನ್ನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಮುಖಂಡರು ಚಿಕಿತ್ಸೆ ಪಡೆಯುತ್ತಿರುವ ಮುಖಂಡರಾದ ಮಂಗೋಟೆ ರುದ್ರೇಶ್, ಧರ್ಮಪ್ರಸಾದ್, ಸುನೀಲ್, ನಕುಲ್ ಅವರುಗಳ ಆರೋಗ್ಯ ವಿಚಾರಿಸಿ, ಘಟನೆ ಕುರಿತಾಗಿ ಮಾಹಿತಿ ಪಡೆದುಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post