ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದಲ್ಲಿ ಆತ್ಮಹತ್ಯೆ ಹೆಚ್ಚಾಗುತ್ತಿದ್ದು ಕೇವಲ ಒಂದು ವರ್ಷದಲ್ಲಿ 13,900ಕ್ಕಿಂತಲೂ ಹೆಚ್ಚು ಯುವಜನರು, ವಿದ್ಯಾರ್ಥಿಗಳು ಆತ್ಮಹತ್ಯೆಗೆ ಒಳಗಾಗಿರುವುದು ಆತಂಕಕಾರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ಆತಂಕ ವ್ಯಕ್ತಪಡಿಸಿದರು.
ನಗರದ ಪೋಲಿಸ್ ಸಭಾಂಗಣದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಎಲ್ಲಾ ತುರ್ತು ಸನ್ನಿವೇಶಗಳಲ್ಲಿ ಉಂಟಾಗಬಹುದಾದ ಮಾನಸಿಕ ಸಮಸ್ಯೆಗಳನ್ನು ಗುರುತಿಸಬೇಕು. ಮಾತ್ರವಲ್ಲದೆ ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತಮ್ಮ ಹಾಗೂ ಇತರರ ಮಾನಸಿಕ ಆರೋಗ್ಯ ನಿರ್ವಹಣೆಯ ಸಂದರ್ಭದಲ್ಲಿ ಕೇವಲ ಪೊಲೀಸ್ ಎಂದಷ್ಟೇ ಅಲ್ಲದೆ ಮಾನವರಾಗಿ ಮನುಷ್ಯರಂತೆ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಪೊಲೀಸ್ ಸಿಬ್ಬಂದಿಗಳಿಗೆ ಮಾನಸಿಕ ಆರೋಗ್ಯ ಕುರಿತ ವಿಚಾರ ಸಂಕಿರಣ ಉಪಯುಕ್ತವಾಗಬಲ್ಲದು. ಜಿಲ್ಲಾ ಕಾನುನು ಸೇವಾ ಪ್ರಾಧಿಕಾರವು ಮಾನಸ ಸಂಸ್ಥೆಯ ಸಹಯೋಗದೊಂದಿಗೆ ಮಾನಸಿಕ ಆರೋಗ್ಯ ಕ್ಲಿನಿಕ್ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಏರ್ಪಡಿಸಿದ ಮಾನಸಿಕ ಆರೋಗ್ಯ ಜನ ಜಾಗೃತಿ ಜಾಥಾಗೆ ನ್ಯಾ. ಮಂಜುನಾಥ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಂ.ಎಸ್. ಸಂತೋಷ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಚಾಲನೆ ನೀಡಿದರು.

ಮಾನಸ ನರ್ಸಿಂಗ್ ಹೋಂ ಮನೋವೈದಯರಾದ ಡಾ. ನವೀನ್ ಮಾತನಾಡಿ, ವಿಪತ್ತು ಸನ್ನಿವೇಶಗಳ ಮಾನಸಿಕ ಸ್ಥಿತಿಗತಿಗಳನ್ನು ವಿವರಿಸಿ ಸಾರ್ವಜನಿಕ ಸೇವೆಯಲ್ಲಿ ಇರುವವರ ಜವಾಬ್ದಾರಿ ಹಾಗೂ ಕೌಶಲ್ಯಗಳ ಕುರಿತು ಉಲ್ಲೇಖಿಸಿದರು.
ಮಾನಸಿಕ ಆರೋಗ್ಯ ಸೇವೆ ಕುಟುಂಬ ಹಾಗೂ ನೆರೆಹೊರೆಯ ಜನರ ಬೆಂಬಲ ಹಾಗೂ ಸಾಂತ್ವನದಿಂದ ಪ್ರಾರಂಭವಾಗುತ್ತದೆ. ಎರಡನೇ ಹಂತ ವಿವಿಧ ಇಲಾಖೆ ಹಾಗೂ ಸಂಸ್ಥೆಗಳದ್ದು. ಮೂರನೆಯ ಹಂತ ಮಾನಸಿಕ ಆರೋಗ್ಯ ತಜ್ಞರದ್ದು ಎಂದು ತಿಳಿಸಿದರು.
ಸಂಧ್ಯಾ ಕಾವೇರಿಯವರು ಮಾತನಾಡಿ, ಮಾನಸಿಕ ಆರೋಗ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ 7 ದಿನಗಳ ಕಾಲ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮಾನಸಿಕ ಆರೋಗ್ಯ ಸಂರಕ್ಷಣೆಯ ಕುರಿತು ಸಾರ್ವಜನಿಕ ಗಮನ ಸೆಳೆಯಲು ದಿನಾಂಕ 11 ರಂದು ಸಿಟಿ ಸೆಂಟರ್ ಮಾಲ್ ನಲ್ಲಿ ಸಂಜೆ 5 ಗಂಟೆಗೆ ನೃತ್ಯ ರೂಪಕ ನಡೆಯಲಿದೆ ಎಂದರು.

ಸಪ್ತಾಹ ಕಾರ್ಯಕ್ರಮಗಳ ಸಮಾರೋಪವು ದಿನಾಂಕ 17ರಂದು ನಗರದ ಗೋಪಿ ವೃತ್ತದಲ್ಲಿ ಮನೋ ಸಾಮಾಜಿಕ ಸಂರಕ್ಷಣೆಯ ಪ್ರತಿಜ್ಞಾ ವಿಧಿಯ ಮೂಲಕ ನಡೆಯಲಿದೆ. ಸಾಯಂಕಾಲ 5.30 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಸವಿತಾ ನಾಗಭೂಷಣ್ ಅವರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ನ್ಯಾಯಾಧೀಶರಾದ ಸಂತೋಷ್, ಡಾ. ರಜನಿ ಪೈ , ರಾಜೇಂದ್ರ ಚೆನ್ನಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಮನಶಾಸ್ತ್ರಜ್ಞರಾದ ಶ್ರೀದೇವಿ ಹಾಗೂ ಡಾ. ಶ್ವೇತಾ, ಎಂ ಫಿಲ್ ಕ್ಲಿನಿಕಲ್ Psychology ಪ್ರಶಿಕ್ಷಣಾರ್ಥಿಗಲಾದ ದೃಶ್ಯ ಮತ್ತು ಚೇತನ ಒತ್ತಡ ನಿರ್ವಹಣೆ ಕುರಿತು ಅಧಿವೇಶನಗಳನ್ನು ನಡೆಸಿದರು.

ಶ್ರೀದೇವಿ ಕಾರ್ಯಕ್ರಮ ನಿರೂಪಿಸಿ, ಡಾ. ಅರ್ಚನಾ ಸ್ವಾಗತಿಸಿದರು. ಡಾ.ಹರಿಹರನ್ ವಂದಿಸಿ, ಎಂಎಸ್’ಸಿ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸುಮಾರು 200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಶೈಕ್ಷಣಿಕ ಸಂಸ್ಥೆಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post