ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರ್ಯಾವರಣ ಟ್ರಸ್ಟ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಸಮಿತಿ ಹಾಗೂ ಶಿವಮೊಗ್ಗದ ವಿವಿಧ ಪರಿಸರಾಸಕ್ತರ ತಂಡಗಳ ಸಂಯುಕ್ತಾಶ್ರಯದಲ್ಲಿ ಜ.21 ಹಾಗೂ 22 ರಂದು ಗಾಜನೂರಿನಿಂದ ಶ್ರೀ ಕ್ಷೇತ್ರ ಕೂಡಲಿಯವರೆಗೆ ನಿರ್ಮಲ ತುಂಗಾ ಅಭಿಯಾನದ ಬೃಹತ್ ಪಾದಯಾತ್ರೆ ಮತ್ತು ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾವರಣ ಟ್ರಸ್ಟ್ ನ ಅಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ತಿಳಿಸಿದರು.
ನಿತ್ಯವೂ ಶಿವಮೊಗ್ಗ ನಗರದ ಕಲುಷಿತ ನೀರು, ಯುಜಿಡಿ ಹಾಗೂ ರಾಜಕಾಲುವೆ ಮೂಲಕ ಅಪಾರ ಪ್ರಮಾಣದ ಕೊಳಚೆ ಮತ್ತು ತ್ಯಾಜ್ಯವು ತುಂಗೆಯ ಒಡಲಾಳವನ್ನು ಸೇರುತ್ತಿದೆ. ಎಷ್ಟೊಂದು ಮಲಿನಗೊಂಡಿದೆ ಎಂದರೆ ಇತ್ತ ಕುಡಿಯಲು ಯೋಗ್ಯವಿಲ್ಲ. ದೇವರ ಅಭಿಷೇಕಕ್ಕೂ ಬಳಸದ ಸುಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ನದಿಯ ನೈಸರ್ಗಿಕ ಹರಿವಿನ ಪ್ರಮಾಣವು ಗಣನೀಯವಾಗಿ ಕುಸಿಯುತ್ತಿದೆ. ಅವೈಜ್ಞಾನಿಕ ಮರಳುಗಾರಿಕೆ, ಆಧುನಿಕ ಕೃಷಿ ಪದ್ಧತಿಯ ಪರಿಣಾಮ ಕೀಟನಾಶಕಗಳಿಂದ ಜಲವು ವಿಷಯುಕ್ತವಾಗಿ ಜಲಚರ ಸಂತತಿಯು ನಾಶವಾಗುತ್ತಿದೆ ಎಂದರು.
9.30ಕ್ಕೆ ಗಾಜನೂರು ಗ್ರಾಮದಲ್ಲಿ, 12ಕ್ಕೆ ಹೊಸಹಳ್ಳಿಯಲ್ಲಿ, 3.30ಕ್ಕೆ ಅರಕೆರೆ ದೇವಸ್ಥಾನದ ಆವರಣದಲ್ಲಿ ಸಭೆ ನಡೆದು ಪಾದಯಾತ್ರೆಯು ಹಳೆಮಂಡ್ಲಿ, ಸವಾಯಿಪಾಳ್ಯ, ಸೀಗೆಹಟ್ಟಿ ಮೂಲಕ ಸಂಜೆ 6ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಯಲು ರಂಗಮAದಿರ ತಲುಪಲಿದ್ದು, ಅಲ್ಲಿ ಕೆ.ಎನ್.ಗೋವಿಂದಾಚಾರ್ಯ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ನಂತರ ಸಂವಾದ ಹಾಗೂ ತುಂಗಾರತಿ ಕಾರ್ಯಕ್ರಮ ನಡೆದು ಬೆಕ್ಕಿನ ಕಲ್ಮಠದಲ್ಲಿ ರಾತ್ರಿ ತಂಗಲಿದೆ ಎಂದರು.
ಜ.22ರ ಬೆಳಿಗ್ಗೆ 8.30ಕ್ಕೆ ಪಾದಯಾತ್ರೆ ಆರಂಭಗೊಂಡು 9.30ಕ್ಕೆ ಹೊಳೆಬೆನವಳ್ಳಿಯಲ್ಲಿ, 10.30ಕ್ಕೆ ಪಿಳ್ಳಂಗಿರಿಯಲ್ಲಿ ಸಭೆ ನಡೆದು ಮಧ್ಯಾಹ್ನ 12ಕ್ಕೆ ಓಪನ್‌ಮೈಂಡ್ ವರ್ಲ್ಡ್ ಸ್ಕೂಲ್‌ನಲ್ಲಿ ವಿಶ್ರಾಂತಿ ಪಡೆದು 2.30ಕ್ಕೆ ಪಾದಯಾತ್ರೆ ಮುಂದುವರೆಯಲಿದೆ. 3.30ಕ್ಕೆ ಶ್ರೀ ಕ್ಷೇತ್ರ ಕೂಡಲಿಯಲ್ಲಿ ನದಿ ಸ್ವಚ್ಚತೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
Discussion about this post