ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂದಿನಿಂದ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾತ್ರ ವ್ಯಾಪಾರ ವ್ಯವಹಾರಗಳಿಗೆ ಅವಕಾಶವಿರುತ್ತದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಜೊತೆ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಜಿಲ್ಲೆಯಲ್ಲಿ ಇಂದಿನಿಂದ ಒಂದು ವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ವ್ಯಾಪಾರ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲಿದ್ದು ನಂತರದ ಅವಧಿಯನ್ನು ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳ್ಳಲಿದೆ ಎಂದರು.
ಅಲ್ಲದೇ ಮಾಸ್ಕ್ ಧರಿಸದೇ ಓಡಾಡುವವರಿಗೆ ಸ್ಥಳದಲ್ಲಿಯೇ ರೂ.200 ದಂಡ ಮತ್ತು ರಾತ್ರಿ 8 ರ ನಂತರದಲ್ಲಿ ಅನಗತ್ಯವಾಗಿ ಸುತ್ತಾಡುವವರಿಗೆ ಮೊಕದ್ದಮೆಯನ್ನು ದಾಖಲಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಒಂದು ವಾರ ಕಳೆದ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದರು.
ಕರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಎಲ್ಲಾ ಕ್ರಮಗಳಿಗೆ ಸಾರ್ವಜನಿಕರು ಇದುವರೆಗೆ ಸಹಕರಿಸಿದ್ದಾರೆ. ಆದರೆ ಕೆಲವು ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಒಂದೆಡೆ ಸೇರುವುದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲರ ಸಲಹೆಯ ಪ್ರಕಾರ ಶಿವಮೊಗ್ಗದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲೆಡೆ ರಾತ್ರಿ 8ರಿಂದ ಕಫ್ರ್ಯೂ ಜಾರಿಯಲ್ಲಿರಲಿದ್ದು, ಶಿವಮೊಗ್ಗದಲ್ಲಿ ಇದು ಸಂಜೆ 6ಗಂಟೆಯಿಂದ ಜಾರಿಯಾಗಲಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಒತ್ತಾಯದ ಲಾಕ್‍ಡೌನ್ ಜಾರಿಗೊಳಿಸುವುದಿಲ್ಲ. ಆದರೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದರು.
ಸಲಹೆಗಳ ಮಹಾಪೂರ
ಸಭೆಯಲ್ಲಿ ಒಟ್ಟು 42ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆಗಳನ್ನು ನೀಡಿದರು. ಸರ್ಕಾರ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಮದುವೆ, ಅಂತ್ಯಸಂಸ್ಕಾರಗಳಲ್ಲಿ ಮಾರ್ಗಸೂಚಿ ಉಲ್ಲಂಘನೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಎಲ್ಲಾ ಸರ್ಕಾರಿ ಕಚೇರಿಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇರಿಸಬೇಕು. ಖಾಸಗಿ ಬಸ್ ನಿಲ್ದಾಣದ ಶುಚಿತ್ವಕ್ಕೆ ಗಮನ ಹರಿಸಬೇಕು. ಹೊಟೇಲ್ ಮತ್ತು ಬೀದಿಬದಿ ತಿನಿಸು ವ್ಯಾಪಾರಸ್ಥರು ಒಮ್ಮೆ ಬಳಕೆ ಮಾಡುವ ಪ್ಲೇಟ್‍ಗಳನ್ನು ಕಡ್ಡಾಯವಾಗಿ ಇರಿಸಬೇಕು. ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಕಡಿವಾಣ ಹಾಕಬೇಕು. ಕ್ವಾರೆಂಟೈನ್ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಲಹೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾತನಾಡಿ, ಜಿಲ್ಲೆಯ ಜನತೆ ಕರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಇದೀಗ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಸಂಪೂರ್ಣ ಲಾಕ್‍ಡೌನ್ ಕಾರ್ಯಸಾಧುವಲ್ಲ. ಆದರೆ ಸಾರ್ವಜನಿಕರು ವೈಯಕ್ತಿಕ ಶಿಸ್ತನ್ನು ಪಾಲಿಸುವ ಮೂಲಕ ಕರೋನಾ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜು, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post