ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಇಂಜಿನಿಯರ್‌ಗಳು, ನಿರ್ವಾಹಕರು ಅಪರೂಪವಾಗುತ್ತಿದ್ದು, ತಾಂತ್ರಿಕ ಜ್ಞಾನದ ಜೊತೆಗೆ ಸಾಮಾಜಿಕ ಜಾಗೃತಿಯುಳ್ಳ ವೃತ್ತಿಪರತೆ ಅತ್ಯವಶ್ಯಕ ಎಂದು ಪ್ರಾರ್ಥನಾ ಇಂಜಿನಿಯರಿಂಗ್ ಕಂಪನಿ ನಿರ್ದೇಶಕ ಕೆ.ವಿ.ನಾರಾಯಣ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ #JNNCE ಎಂಬಿಎ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ (ಓರಿಯಂಟೇಷನ್) ಉದ್ಘಾಟಿಸಿ ಮಾತನಾಡಿದರು.

ಉತ್ಪನ್ನಗಳ ಬಗ್ಗೆ ಜ್ಞಾನ ಹಾಗೂ ಸಂಪನ್ಮೂಲಗಳ ನಿರ್ವಹಣೆಯು ಉದ್ಯಮಶೀಲತೆ ಮತ್ತು ಕೈಗಾರಿಕಾ ಅರಿವು ವಿಸ್ತರಿಸಿಕೊಳ್ಳುವಂತೆ ಮಾಡುತ್ತದೆ. ತ್ಯಾಜ್ಯ ನಿರ್ವಹಣೆ ಎಂಬುದು ಸಮಾಜ ಎದುರಿಸುತ್ತಿರುವ ಬಹು ದೊಡ್ಡ ಸವಾಲು. ಪರಿಸರ ಸಂರಕ್ಷಣೆಯನ್ನು ಕೇಂದ್ರೀಕರಿಸಿ ಉದ್ಯಮಶೀಲ ಅವಕಾಶಗಳನ್ನು ರೂಪಿಸಿಕೊಳ್ಳಿ. ಯಶಸ್ವಿ ಉದ್ಯಮಿಗಳ ಬದುಕಿನ ಹಾದಿಯಿಂದ ಪ್ರೇರಣೆ ಪಡೆಯಿರಿ. ವೈಫಲ್ಯಗಳಿಗೆ ಹೆದರದೆ, ಪ್ರಯೋಗಶೀಲ ಮನಸ್ಥಿತಿಯೊಂದಿಗೆ ಸಂವೇದನಶೀಲ ವ್ಯಕ್ತಿತ್ವವಾಗಿ ಬಾಳಿ ಎಂದು ಹಾರೈಸಿದರು.

ಆಧುನಿಕ ಜೀವನ ಪದ್ದತಿಯಲ್ಲಿ, ಸಂಸ್ಕೃತಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಯಾವ ಆಶಯಗಳನ್ನು, ಇಂದಿನ ಜೀವನ ಪದ್ದತಿ ಕಲಿಸಿಕೊಡುತ್ತಿಲ್ಲ. ತಂದೆ ತಾಯಿಯ ಬೆಲೆ ಗೊತ್ತಿಲ್ಲದವರು ನಿಜವಾದ ಅನಾಥರು. ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದರ ಮೂಲಕ ಯುವ ಸಮೂಹ ಸಾಂಸ್ಕೃತಿಕ ಶ್ರೀಮಂತರಾಗಲು ಪ್ರಯತ್ನಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಎಂ.ಆರ್.ಸೀತಾಲಕ್ಷ್ಮೀ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಡಾ.ಸಂತೋಷ್ ಸ್ವಾಗತಿಸಿ, ಡಾ.ಪಿ.ಎಸ್.ಸುಭದ್ರ ಪ್ರಾರ್ಥಿಸಿ, ಡಾ.ಬಿ.ವಿ.ಶ್ರೀನಿವಾಸಮೂರ್ತಿ ವಂದಿಸಿ, ಡಾ.ವಿಕ್ರಮ್.ವಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post