ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತೀರ್ಥಹಳ್ಳಿಯ ತುಂಗಾ ವಿದ್ಯಾವರ್ಧಕ ಸಂಘದ ತುಂಗಾ ಮಹಾವಿದ್ಯಾಲಯವು #Thirthahalli Tunga Mahavidyalaya ವಜ್ರಮಹೋತ್ಸವದ ಸಂಭ್ರಮದ ಅಂಗವಾಗಿ ಪಿ.ಯು. ವಿದ್ಯಾರ್ಥಿಗಳಿಗೆ ಎರಡು ವರ್ಷದ ಉಚಿತ ಶಿಕ್ಷಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಾ.ಬಿ. ಗಣಪತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1967ರಲ್ಲಿ ಆರಂಭವಾದ ಮಲೆನಾಡಿನ ಹೆಮ್ಮೆಯ ವಿದ್ಯಾ ಸಂಸ್ಥೆ ತುಂಗಾ ಮಹಾವಿದ್ಯಾಲಯ ತುಂಗಾ ವಿದ್ಯಾವರ್ಧಕ ಸಂಘದ ಮೂಲಕ ಪದವಿ, ಪದವಿಪೂರ್ವ, ಹಾಗೂ ಎಂ.ಕಾಂ., ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ನಡೆಸುತ್ತ ಮುನ್ನಡೆಯುತ್ತ ಮಲೆನಾಡಿನ ಜನರ ಜೀವನದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು.
ತೀರ್ಥಹಳ್ಳಿಯಲ್ಲಿ ವಿದ್ಯೆಯ ಬೆಳಕು ಮೂಡಿಸುವ ಮೂಲಕ ಶೈಕ್ಷಣಿಕ ವಲಯದಲ್ಲಿ ತುಂಗಾ ಮಹಾವಿದ್ಯಾಲಯ ಮುಂಚೂಣಿಯಲ್ಲಿದೆ. ಡಾ.ಬಿ.ಎನ್. ರಂಗಪ್ಪ, ಕಾಸರವಳ್ಳಿ ರಾಮಕೃಷ್ಣ ರಾಯರು, ಕಲ್ಲಹಳ್ಳ ರಾಮಭಟ್ ಮುಂತಾದ ಶಿಕ್ಷಣ ಪ್ರೇಮಿಗಳ ಅವಿರತ ಶ್ರಮದ ಫಲವಾಗಿ ತುಂಗಾ ಮಹಾವಿದ್ಯಾಲಯವು ವಜ್ರ ಮಹೋತ್ಸವದ ಹೊಸ್ತಿಲಲ್ಲಿ ಇದೆ ಎಂದರು.
ಈ ಸಂಭ್ರಮದ ಭಾಗವಾಗಿ 2025-26ರ ಸಾಲಿನಲ್ಲಿ ತುಂಗಾ ಪಿ.ಯು.ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿನಲ್ಲಿ ಶೇ.70ಕ್ಕಿಂತಲೂ ಹೆಚ್ಚಿ ಅಂಕ ಪಡೆದವರಿಗೆ ಉಚಿತವಾಗಿ ಶಿಕ್ಷಣ ನೀಡಲು ಸಂಘ ನಿರ್ಧರಿಸಿದೆ. ಹಿಂದಿನಿಂದಲೂ ತುಂಗಾ ವಿದ್ಯಾ ಸಂಸ್ಥೆ ಶಿಕ್ಷಣವನ್ನು ವ್ಯಾಪಾರವಾಗಿ ಭಾವಿಸದೆ ಸೇವೆಯಂದೇ ಪರಿಗಣಿಸಿಗೊಂಡು ಬಂದಿದೆ. ಕಡುಬಡತನದ ಮಕ್ಕಳ ಶೈಕ್ಷಣಿಕ ಕನಸಿಗೆ ಈ ಮೂಲಕ ವಜ್ರಮಹೋತ್ಸವದ ಕೊಡುಗೆಯಾಗಿ ಎರಡು ವರ್ಷಗಳ ಉಚಿತ ಶಿಕ್ಷಣದ ಯೋಜನೆ ಘೋಷಿಸುತ್ತಿದೆ. ಅರ್ಹ ವಿದ್ಯಾರ್ಥಿಗಳು ಇದನ್ನು ಬಳಸಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯವು ಇವರೆಗೆ 8 ಮೊದಲ ರ್‍ಯಾಂಕುಗಳು ಸೇರಿದಂತೆ ಒಟ್ಟು 56 ರ್‍ಯಾಂಕ್‍ಗಳನ್ನು ಗಳಿಸಿ ಕುವೆಂಪು ವಿವಿ ಮಟ್ಟದಲ್ಲೇ ಅತ್ಯುತ್ತಮ ಕಾಲೇಜು ಎಂದು ಹೆಸರು ಗಳಿಸಿದೆ. ಸಿಇಟಿಯಲ್ಲಿ 6ನೇ ರ್‍ಯಾಂಕ್ ಗಳಿಸಿರುವುದು ಕಾಲೇಜಿಗೆ ಹೆಮ್ಮೆಯಾಗಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೆಸರಾಂತ್ ಕ್ರೀಡಾಪಟುಗಳಾಗಿದ್ದಾರೆ. ರಾಜಕೀಯ ಮುತ್ಸದ್ದಿಗಳು, ಶಿಕ್ಷಣ ತಜ್ಞರು, ಉಪಕುಲಪತಿ, ಪ್ರಾಧ್ಯಾಪಕರು, ಸಾಹಿತಿ-ಕಲಾವಿದರು, ವಿಜ್ಞಾನಿಗಳು, ಸೈನಿಕರು, ವೈದ್ಯರು ಹೀಗೆ ಹಲವಾರು ಉನ್ನತ ಹುದ್ದೆಗಳಲ್ಲಿದ್ದಾರೆ. ಇಂತಹ ವಿದ್ಯಾ ಸಂಸ್ಥೆಗೆ, ಪಿಯು, ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಸೇರುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ತುಂಗಾ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಎಂ.ಎನ್.ರಮೇಶ್, ಕನ್ನಂಗಿಶೇಷಾದ್ರಿ, ಪ್ರಾಂಶುಪಾಲರಾದ ಡಾ. ಆರ್.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post