ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಚುನಾವಣಾ ಶಾಖೆಯು ಭಾರತ ಚುನಾವಣಾ ಆಯೋಗದ ನಿರ್ದೇಶದಂತೆ ವಿಧಾನಸಭಾ ಕ್ಷೇತ್ರವಾರು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರ ಅನುಷ್ಟಾನಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯಲ್ಲಿ ಕಾರ್ಯನಿರ್ವಹಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಹೊರಡಿಸಿದೆ.
ಮತದಾರರ ಪಟ್ಟಿ ಪರಿಶೀಲನೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆಗಳನ್ನು ಹೆಚ್ಚಿಸುವುದರ ಕುರಿತು ಪರಿಶೀಲಿಸಲು ನಿಗಧಿಪಡಿಸಲಾಗಿದ್ದ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್ 16ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಮತದಾರರು ತಮ್ಮ ಆಕ್ಷೇಪಣೆ ಮತ್ತು ಅಹವಾಲು ಸಲ್ಲಿಸಲು ಡಿ.16 ರಿಂದ 2020 ಜನವರಿ 15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ವೀಕರಿಸಲಾದ ಆಕ್ಷೇಪಣೆ ಹಾಗೂ ಅಹವಾಲುಗಳನ್ನು 2020 ಜನವರಿ 27ರಂದು ಪರಿಶೀಲಿಸಲಾಗುವುದು. ನಂತರ ಫೆಬ್ರವರಿ 04ರಂದು ಪೂರಕ ಮತದಾರರ ಪಟ್ಟಿ ತಯಾರಿಸಲಾಗುವುದು. ಅಂತಿಮವಾಗಿ 2020ರ ಫೆಬ್ರವರಿ 07ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.
ಮತದಾರರ ಪರಿಶೀಲನಾ ಕಾರ್ಯವು ನವೆಂಬರ್ 30 ರವರೆಗೆ ನಡೆಯಲಿರುವುದರಿಂದ ಪ್ರತಿ ಜಿಲ್ಲೆಯ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸಿಕೊಳ್ಳಲು ‘Voter Helpline’ ಮೊಬೈಲ್ ಆ್ಯಪ್‌ನ್ನು ಬಳಸಿಕೊಳ್ಳಬಹುದು. ಅಂತೆಯೇ ಮತದಾರರ ಸಹಾಯವಾಣಿ 1950ಗೆ ಉಚಿತ ಕರೆ ಮಾಡಿ ಮಾಹಿತಿ ಪಡೆಯಬಹುದು. ಚುನಾವಣೆಯ ಮಾಹಿತಿಗಾಗಿ ಇರುವ ಜಾಲತಾಣ: www.nvsp.in ಶಿವಮೊಗ್ಗ ಜಿಲ್ಲೆಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳು(ಸಿಎಸ್‌ಸಿ), ಮತ್ತು ಆಯಾ ತಾಲೂಕು ಕೇಂದ್ರಗಳಲ್ಲಿ ಆರಂಭಿಸಲಾಗಿರುವ ಮತದಾರರ ಮಾಹಿತಿ ಕೇಂದ್ರ(ವಿಎಫ್‌ಸಿ) ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಮತದಾರರಿಗೆ ಮಾಹಿತಿ ನೀಡಲು 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಾನಗರಪಾಲಿಕೆಯಲ್ಲಿ ಹಾಗೂ ಉಳಿದಂತೆ ಎಲ್ಲಾ ತಾಲೂಕುಗಳ ತಾಲೂಕು ಕಚೇರಿಗಳಲ್ಲಿ ಮಾಹಿತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಅರ್ಹ ಮತದಾರರು ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆಮನೆ ಭೇಟಿ ನೀಡಿ ಮತದಾರರ ಪರಿಶೀಲನೆ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಆದ್ದರಿಂದ ಮತಗಟ್ಟೆ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರು ಮತಗಟ್ಟೆ ವ್ಯಾಪ್ತಿಯಲ್ಲಿ ತಮ್ಮ ಪ್ರತಿನಿಧಿಗಳನ್ನು ನಿಯೋಜಿಸಿ ಪರಿಷ್ಕರಣಾ ಕಾರ್ಯಕ್ಕೆ ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Get In Touch With Us info@kalpa.news Whatsapp: 9481252093
Discussion about this post