ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸೋಂಕು ತಗುಲಲು ಅವಕಾಶ ಇಲ್ಲದಿದ್ದರೂ ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದೆಂಬ ಉದ್ದೇಶದಿಂದ ಸ್ವಯಂಪ್ರೇರಿತ ಕ್ವಾರಂಟೈನ್ ಅವಧಿ ಮುಗಿಸಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಸಚಿವರುಗಳಾದ ಎಸ್.ಆರ್. ಬೊಮ್ಮಾಯಿ ಹಾಗೂ ಸಿ.ಟಿ. ರವಿ ಅವರೊಂದಿಗೆ ಕ್ವಾರಂಟೈನ್ ಅವಧಿಯ ನಂತರ ಮೊದಲ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ವಾರಂಟೈನ್ ಒಂದು ಹೊಸ ಅನುಭವ ನೀಡಿದ್ದು ಕೆಲಸ ಮಾಡಲು ಮತ್ತಷ್ಟು ಹೊಸ ಚೈತನ್ಯ ನೀಡಿದೆ. ಇನ್ನು ಮುಂದೆ ಎರಡುಪಟ್ಟು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದರು.
ಶೀಘ್ರದಲ್ಲೇ ನಗರಕ್ಕೆ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಆಗಮನ ಪ್ರಾರಂಭವಾಗಲಿದ್ದು ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸರ್ಕಾರ ಲಾಕ್ ಡೌನ್ ನಿಯಮಗಳಲ್ಲಿ ಸಡಿಲ ಮಾಡಿದೆ ಎಂದರೆ ಕೊರೋನ ಇಲ್ಲ ಎಂದು ಅರ್ಥವಲ್ಲ. ವೈರಸ್ ಜೊತೆಯಲ್ಲಿ ನಾವು ಜೀವನ ನಡೆಸಬೇಕಾದ ಅನಿವಾರ್ಯತೆ ಇದ್ದು ಸರ್ಕಾರದ ಮಾರ್ಗಸೂಚಿಗಳನ್ನು ಜನರು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸಚಿವರು ಹೇಳಿದರು.
ಸರ್ಕಾರ ಉತ್ತಮವಾದ ಆರ್ಥಿಕ ಪ್ಯಾಕೇಜ್ ನೀಡಿದ್ದು, ಸಂಪನ್ಮೂಲ ಲಭ್ಯತೆಯ ಆಧಾರದ ಮೇಲೆ ಇನ್ನೂ ಹೆಚ್ಚಿನ ನೆರವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಏಪ್ರಿಲ್ 22 ನೇ ತಾರೀಕು ಹೆಬ್ಬಾಳದಲ್ಲಿ ಬಡವರಿಗೆ ಅಗತ್ಯ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಹೋದ್ಯೋಗಿ ಸಚಿವರುಗಳೊಂದಿಗೆ ಭಾಗವಹಿಸಿದ್ದಾಗ ಸೋಂಕಿತನ ಸಂಪರ್ಕಕ್ಕೆ ಒಳಗಾಗಿದ್ದು, ತಾವೆಲ್ಲರೂ ಮಾಸ್ಕ್ ಧರಿಸಿದ್ದರಿಂದ ಅಪಾಯವಿಲ್ಲವೆಂದು ತಮಗೇ ಮೊದಲೇ ಅರಿವಿತ್ತು ಎಂದು ಸಚಿವರು ತಿಳಿಸಿದ್ದಾರೆ. ಕ್ವಾರಂಟೈನ್ ಅವಧಿಯಲ್ಲಿ ತಮಗೆ ಶುಭ ಹಾರೈಸಿದ ಎಲ್ಲರಿಗೂ ಸಚಿವರು ಧನ್ಯವಾದಗಳನ್ನು ತಿಳಿಸಿ, ಮಾಧ್ಯಮ ಮಿತ್ರರು ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕೋರಿದ್ದಾರೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post