ಕಲ್ಪ ಮೀಡಿಯಾ ಹೌಸ್ | ಸೊರಬ |
ಹಲವು ದಶಕಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ದಿಟ್ಟ ನಿಲುವು ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮಾದಿಗ ಸಮಾಜವು ಬಿಜೆಪಿಯನ್ನು ಬೆಂಬಲಿಸುತ್ತಿರುವುದಾಗಿ ಕರ್ನಾಟಕ ಮಾದಿಗ ದಂಡೋರ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ದಂಡೋರ ಮೂರ್ತಿ ಹೇಳಿದರು.
ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2004ರಲ್ಲಿ ಸರ್ಕಾರ ಸದಾಶಿವ ಆಯೋಗ ರಚಿಸಿತ್ತು. ಆದರೆ, ವರದಿಯನ್ನು ಜಾರಿಗೆ ತಂದಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಒಳ ಮೀಸಲಾತಿಯನ್ನು ಮಾದಿಗ ಸಮುದಾಯಕ್ಕೆ ನೀಡಿದೆ. ಈ ನಿಟ್ಟಿನಲ್ಲಿ ಕೃತಜ್ಞತಾ ಪೂರ್ವಕವಾಗಿ ರಾಜ್ಯದ 224 ಕ್ಷೇತ್ರಗಳಲ್ಲೂ ಸಮಿತಿಯ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ಅವರ ಸೂಚನೆ ಮೇರೆ ಸಮಾಜವು ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು.
ಎಸ್ಸಿ ಸಮಾಜದಲ್ಲಿ 101 ಜಾತಿಗಳಿದ್ದು, ಈ ಪೈಕಿ ಒಳ ಮೀಸಲಾತಿ ಜಾರಿಗೆ ತರುವ ಮೂಲಕ ಜನಸಂಖ್ಯೆಯ ಆಧಾರ ಮೇಲೆ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಕೆಲವರು ರಾಜಕೀಯ ಪ್ರೇರಿತರಾಗಿ ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಮಾದಿಗ ಜನಾಂಗಕ್ಕೆ ಒಳಮೀಸಲಾತಿಯಿಂದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಉದ್ಯೋಗದಲ್ಲಿ ಅನುಕೂಲ ದೊರೆಯುವ ರೀತಿ ನ್ಯಾಯ ಸಿಕ್ಕಿದೆ. ಒಳ ಮೀಸಲಾತಿಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಿಲ್ಲ. ಬದಲಿಗೆ ಮೀಸಲಾತಿಯ ಹಂಚಿಕೆಯಾಗಿದೆ. ಎಸ್ಸಿ ಸಮುದಾಯದವರು ಎಲ್ಲರೂ ಸಹೋದರರು. ಈ ಬಗ್ಗೆ ಪರಿಪೂರ್ಣವಾದ ಮಾಹಿತಿ ಸಮುದಾಯಕ್ಕೆ ತಲುಪುವ ಕೆಲಸವಾಗಬೇಕು. ಒಳ ಮೀಸಲಾತಿ ಜಾರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅನೇಕ ಸಚಿವರ ಶ್ರಮವಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾದಿಗ ದಂಡೋರ ರಾಜ್ಯ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಶಿಕಾರಿಪುರ, ಶಿವಮೊಗ್ಗ ನಗರ ಪ್ರಮುಖರಾದ ಎನ್.ಆರ್.ಕೆ. ರಂಗನಾಥ್, ಅರುಣ್, ತಾಲೂಕು ಸಂಚಾಲಕ ಲಿಂಗರಾಜ ನೇರಲಗಿ ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















