ಕಲ್ಪ ಮೀಡಿಯಾ ಹೌಸ್ | ರಾಣೆಬೆನ್ನೂರು |
ಇಲ್ಲಿನ ರೈಲು ನಿಲ್ದಾಣ ಹಾಗೂ ಹೊಸದಾಗಿ ನಿರ್ಮಿಸಲಾದ ರೈಲ್ವೆ ವಸತಿ ಗೃಹಗಳ ಪರಿಶೀಲಿಸಿದ ನೈಋತ್ಯ ರೈಲ್ವೆ ಪ್ರಧಾನ ನಿರ್ವಾಹಕರಾದ ಮುಕುಲ್ ಸರನ್ ಮಾಥುರ್ ಅವರು, ಪ್ರಯಾಣಿಕರ ಸೌಕರ್ಯಗಳ ಹೆಚ್ಚಳ ಕುರಿತಾಗಿ ಚರ್ಚಿಸಿದರು.
ನೈಋತ್ಯ ರೈಲ್ವೆ ಪ್ರಧಾನ ನಿರ್ವಾಹಕರಾದ ಮುಕುಲ್ ಸರನ್ ಮಾಥುರ್ ಅವರು ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ರಾಣೆಬೆನ್ನೂರು ರೈಲು ನಿಲ್ದಾಣವನ್ನು #Ranebennuru Railway station ಪರಿಶೀಲಿಸಿದರು.
ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸುವುದು, ನಿಲ್ದಾಣದ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವಿಮರ್ಶಿಸಿ, ಪ್ರಮುಖವಾಗಿ ಉಲ್ಲೇಖಿಸಿದರು.
ಜೊತೆಗೆ ರಾಣೆಬೆನ್ನೂರು- ಚಿಕ್ಕಜಾಜೂರು ಮತ್ತು ಚಿಕ್ಕಜಾಜೂರು-ಮೊಳಕಾಲ್ಮೂರು ವಿಭಾಗಗಳ ನಡುವೆ ವಿಂಡೋ ಟ್ರೈಲಿಂಗ್ ಇನ್‌ಸ್ಪೆಕ್ಷನ್ ನಡೆಸಿದರು. ಈ ಸಂದರ್ಭದಲ್ಲಿ ಹಳಿ ಸ್ಥಿತಿ, ಸುರಕ್ಷತಾ ಅಂಶಗಳು ಮತ್ತು ವಿಭಾಗದ ಕಾರ್ಯಗಳನ್ನು ಪರಿಶೀಲಿಸಿದರು.
ಸಾಸಲು ನಿಲ್ದಾಣದಿಂದ ಐರನ್ ಓರ್ ಸರಕು ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದು ವಿಭಾಗದ ಕಾರ್ಯ ವಿಧಾನ ಮತ್ತು ಸರಕು ಸಾರಿಗೆ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಯತ್ನವು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವಲ್ಲಿ ಹಾಗೂ ರೈಲ್ವೆಯ ಆದಾಯವನ್ನು ವೃದ್ಧಿಸುವಲ್ಲಿ ಸರಕು ಸಂಚಾರದ ಮಹತ್ವವನ್ನು ಒತ್ತಿ ಹೇಳುತ್ತದೆ ಎಂದು ಇಲಾಖೆ ತಿಳಿಸಿದೆ.
ಇದಲ್ಲದೆ, ರಾಣೆಬೆನ್ನೂರು ಮತ್ತು ಚಿಕ್ಕಜಾಜೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ರೈಲು ವಸತಿ ಗೃಹಗಳನ್ನು ಉದ್ಘಾಟಿಸಿದರು. ಇದು ಸಿಬ್ಬಂದಿ ಕಲ್ಯಾಣ ಹಾಗೂ ರೈಲು ನೌಕರರ ವಸತಿ ಸೌಲಭ್ಯಗಳ ಸುಧಾರಣೆಯ ಮತ್ತೊಂದು ಮೈಲಿಗಲ್ಲಾಗಿದೆ.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯಾಚರಣೆ ನಿರ್ವಾಹಕರಾದ ಪ್ರಶಾಂತ್ ಕುಮಾರ್, ಮುಖ್ಯ ಇಂಜಿನಿಯರ್ ಸಿ.ಎಂ. ಗುಪ್ತ, ಮೈಸೂರು ವಿಭಾಗೀಯ ರೈಲು ನಿರ್ವಾಹಕರಾದ ಮುದಿತ್ ಮಿತ್ತಲ್, ಇತರ ಹಿರಿಯ ವಿಭಾಗೀಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















