ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿರುವ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಶನಿವಾರ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಆಯುಷ್ ಹಾಗೂ ಆಯುರ್ವೇದ ಮಹಾವಿದ್ಯಾಲಯದ ಅಧಿಕಾರಿ ಹಾಗೂ ಉಪನ್ಯಾಸಕರೊಂದಿಗೆ ಸಭೆ ನಡೆಸಿ, ಮಹಾವಿದ್ಯಾಲಯದ ಅಭಿವೃದ್ಧಿ ಕಾರ್ಯಗಳ ಅನುಷ್ಟಾನದ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.
ಯೋಗ ತರಗತಿ ಆರಂಭ
ಜಿಲ್ಲೆಯ ಎಲ್ಲಾ ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಯೋಗ ತರಗತಿಗಳನ್ನು ನಡೆಸುವ ಕುರಿತು ಯೋಜನೆ ರೂಪಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಆಯುಷ್ ಇಲಾಖೆ ವತಿಯಿಂದ ದೈಹಿಕ ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಬೇಕು. ಈಗಾಗಲೇ 630 ಶಿಕ್ಷಕರಿಗೆ ಯೋಗ ತರಬೇತಿ ನೀಡಲಾಗಿದ್ದು, ಈ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದ ಕಾರಣ, 132 ಪದವಿ ಪೂರ್ವ ಕಾಲೇಜುಗಳಲ್ಲಿ ಯೋಗ ತರಗತಿಗಳನ್ನು ನಡೆಸಲು 25 ಮಂದಿಯನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡುವಂತೆ ಸಚಿವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಮಾತನಾಡಿ, ಕರೋನಾ ಸಂದರ್ಭದಲ್ಲಿ ಆಯುಷ್ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಚ್ಯವನ್‍ಪ್ರಾಶ ಒದಗಿಸಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧಿಗಳು ಆಯುಷ್ ಇಲಾಖೆಯಲ್ಲಿ ಲಭ್ಯವಿದ್ದು, ಅದನ್ನು ಬಳಸಲಾಗುತ್ತಿದೆ. ಆಯುಷ್ ಇಲಾಖೆಯಿಂದ ನೀಡಲಾಗುತ್ತಿರುವ ಸೇವೆಗಳ ಗುಣಮಟ್ಟದ ಕುರಿತು ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಪ್ರಸ್ತಾವನೆ
ಜಿಲ್ಲಾ ಆಯುಷ್ ಕಚೇರಿಯನ್ನು ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ನಿವೇಶನ ಒದಗಿಸಬೇಕು. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್ ಪಂಚಕರ್ಮ ಘಟಕ ಕಟ್ಡಡ ತುಂಬಾ ಹಳೆಯದ್ದಾಗಿದ್ದು, ಹೊಸ ಕಟ್ಟಡ ಅಥವಾ ಬದಲಿ ಕಟ್ಟಡ ವ್ಯವಸ್ಥೆ ಮಾಡಬೇಕು. ಜಿಲ್ಲಾ ಆಯುಷ್ ಕಚೇರಿ ವ್ಯಾಪ್ತಿಯಲ್ಲಿರುವ ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಪುರಪ್ಪಮನೆ, ವಿಜಾಪುರ, ಬೆಳ್ಳೂರು, ತ್ರಿಣಿವೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿ ಹುದ್ದೆಗಳು ಮಾತ್ರ ಮಂಜೂರಾಗಿದ್ದು, 5 ಡಿ ಗ್ರೂಪ್ ಹುದ್ದೆಗಳನ್ನು ಮಂಜೂರು ಮಾಡಬೇಕಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಪುಷ್ಪಾ ಅವರು ಮನವಿಯನ್ನು ಸಲ್ಲಿಸಿದರು.
ಆಯುರ್ವೇದ ಮಹಾವಿದ್ಯಾಲಯ ಹಾಗೂ ಬೋಧನಾ ಆಸ್ಪತ್ರೆಯ ಪ್ರಾಂಶುಪಾಲ ಡಾ.ಮಹಮ್ಮದ್ ಗೌಸ್ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post