ಶಿವಮೊಗ್ಗ: ಮಕ್ಕಳಿಗೆ ಉತ್ತಮ ಮಾರ್ಗದಲ್ಲಿ ಸಾಗುವ ಸಂಸ್ಕಾರವನ್ನು ನೀಡಬೇಕು. ಕುಟುಂಬದ ಹಿರಿಯರು ಹಾಗೂ ಗುರುಗಳು ಇದನ್ನು ಮಾಡಬೇಕು ಎಂದು ಶೃಂಗೇರಿ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತಿ ಸ್ವಾಮಿಗಳು ಕರೆ ನೀಡಿದರು.
ಶ್ರೀಗಂಧ ಸಂಸ್ಥೆಯ 25ನೆಯ ವಾರ್ಷಿಕೋತ್ಸವದ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಆರ್ಶೀವಚನ ನೀಡಿ ಮಾತನಾಡಿದರು.
ಯಾರನ್ನು ಗೌರಸಬೇಕೋ ಅವರನ್ನು ಗೌರಸದಿದ್ದರೆ, ಶ್ರೇಯಸ್ಸಿಗೆ ಧಕ್ಕೆ ಬರುತ್ತದೆ. ಭಗವಂತ ಗುರು ಮತ್ತು ಸಮಾಜಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು. ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ತ್ರಿಕರಣಶುದ್ಧಿಯಿಂದ ನಾವು ಕೆಲಸ ಮಾಡಬೇಕು ಎಂದರು.
ಜೀವನದಲ್ಲಿ ಧರ್ಮಕ್ಕೆ ಪ್ರಾಧಾನ್ಯತೆ ಕೊಡಬೇಕು. ಧರ್ಮದಿಂದಲೇ ಎಲ್ಲವೂ ತಾನಾಗಿ ಬರುತ್ತದೆ. ಯಾವುದನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆಯೋ ಅದೇ ಧರ್ಮ. ನಾವು ಯಾವುದೇ ಕೆಲಸ ಮಾಡುವ ಮುನ್ನ ಅದರ ಅರ್ಥ ತಿಳಿದುಕೊಳ್ಳಬೇಕು. ಆನಂತರ ಆಚರಣೆ ಮಾಡಬೇಕು. ಧರ್ಮವನ್ನು ತಿಳಿದುಕೊಂಡರೆ ಆಚರಣೆಗೆ ಅನುಕೂಲವಾಗುತ್ತದೆ. ಅಧರ್ಮವನ್ನು ತಿಳಿದುಕೊಂಡರೆ, ದುರ್ಮಾರ್ಗವನ್ನು ಬಿಡಲು ಅನುಕೂಲವಾಗುತ್ತದೆ ಎಂದರು.
ಶೃಂಗೇರಿ ಮಠದ ಧರ್ಮಾಧಿಕಾರಿ ಗೌರಿಶಂಕರ್ ಮಾತನಾಡಿ, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿಕೊಳ್ಳುವ ಅವಶ್ಯಕತೆ ಈಗ ಹೆಚ್ಚಿದೆ. ಹೊಸ-ಹೊಸ ವಿದ್ಯೆಗಳು ನಮ್ಮನ್ನು ಮೋಹಗೊಳಿಸುತ್ತಿವೆ. ಅದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯನ್ನು ನಾವು ಹೊಂದಿದ್ದೇವೆ. ಆದರೆ, ಇದು ಸುಳ್ಳು. ಸಮಾಜದಲ್ಲಿ ರಿಯರು ಒಳ್ಳೆಯ ಸಂಸ್ಕೃತಿ ಮತ್ತು ವಾತಾವರಣವನ್ನು ಬೆಳೆಸುತ್ತಿದ್ದಾರೆ. ಇದನ್ನು ಬೆಳೆಸಿಕೊಂಡು ಹೋಗುವುದು ವ್ಯಕ್ತಿ ಮತ್ತು ಸಂಘ-ಸಂಸ್ಥೆಗಳ ಕೆಲಸ ಎಂದರು.
ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ನಗರದಲ್ಲಿ ಸಾಂಸ್ಕೃತಿಕ ಕಂಪನ್ನು ಹರಡುವುದು ಮತ್ತು ಪ್ರಜ್ಞಾವಂತರನ್ನು ಪುರಸ್ಕರಿಸುವುದು ತಮ್ಮ ಸಂಸ್ಥೆಯ ಉದ್ದೇಶ. ಸಮಾಜವನ್ನು ಜಾಗೃತಿಗೊಳಿಸಿ ಜಾತ-ಮತ ಭೇದಲ್ಲದೆ ಕಾರ್ಯಕ್ರಮವನ್ನು ನೀಡಲಾಗುತ್ತದೆ. ಇತ್ತೀಚೆಗೆ ದೇವರು ಜಾತಿಗೆ ಸೀಮಿತವಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎನ್ನುವುದನ್ನು ಸಾಧಿಸಿ ತೋರಿಸುವ ಕೆಲಸವನ್ನು ತಮ್ಮ ಸಂಸ್ಥೆ ಮಾಡುತ್ತಿದೆ ಎಂದರು.
ಶೃಂಗೇರಿ ಮಠದ ಋತ್ವಿಜರಿಂದ ವೇದ ಘೋಷ, ಕು. ನಿಧಿ ಮತ್ತು ಕು ಸಂಜನಾ ಅವರಿಂದ ಪ್ರಾರ್ಥನೆ ನಡೆಯಿತು. ಸಂಸ್ಥೆಯ ಸಂಚಾಲಕ ಬಿ.ಆರ್. ಮಧುಸೂದನ್ ಸ್ವಾಗತಿಸಲಾಯಿತು.
ಕೊನೆಯಲ್ಲಿ ಮಠದ ವತಿಯಿಂದ ತರಿಸಿದ್ದ ಲಡ್ಡು ಪ್ರಸಾದ ಮತ್ತು ಮಂತ್ರಾಕ್ಷತೆಯನ್ನು ಭಗವದ್ಭಕ್ತರೆಲ್ಲರಿಗೂ ವಿತರಿಸಲಾಯಿತು.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Discussion about this post