ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಹಿರಿಯ ಲೇಖಕ, ಸಾಹಿತಿ, ಗ್ರಂಥ ಕರ್ತ ಹಂಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಶುಕ್ರವಾರ ಸಿಎಂ ಸಿದ್ದರಾಮಯ್ಯ #CM Siddaramaiah ಮೈಸೂರಿನಲ್ಲಿ ಈ ವಿಷಯ ಘೋಷಣೆ ಮಾಡಿದ್ದಾರೆ.
ದಸರಾ ಉನ್ನತ ಮಟ್ಟದ ಸಮಿತಿ ಸಭೆ ದಸರಾ ಉದ್ಘಾಟಕರ ಆಯ್ಕೆಯನ್ನು ನನಗೇ ಬಿಟ್ಟಿತ್ತು. ಈಗ ಹಂಪನಾ ಆಯ್ಕೆ ಮಾಡಲು ನಿರ್ಧರಿದ್ದೇವೆ. ಅವರನ್ನು ಖುದ್ದು ಭೇಟಿ ಮಾಡಿ ಸರ್ಕಾರಿ ಗೌರವದೊಂದಿಗೆ ಅಧಿಕೃತ ಆಹ್ವಾನ ನೀಡುತ್ತೇವೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ಹೇಳಿದರು.
ಅಕ್ಟೋಬರ್ 3 ರಂದು ಬೆಳಗ್ಗೆ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಹಂಪನಾ ಅವರು ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದೂ ಅವರು ವಿವರಿಸಿದರು.
Also read: ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ತಂಡ ಸತತ ಎರಡನೇ ಬಾರಿಗೆ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ
ಯಾರು ಯಾರು ದಸರಾ ಉದ್ಘಾಟನೆ ಮಾಡಿದ್ದರು ?
ದಸರಾವನ್ನು ಉದ್ಘಾಟನೆ ಮಾಡಿದ ಅತಿ ಗಣ್ಯರಲ್ಲಿ ಸಾಹಿತಿಗಳಿಗೇ ಅಗ್ರ ಸ್ಥಾನ ದೊರಕಿದೆ. 2014ರಿಂದ ಆರಂಭವಾದ ದಸರಾ ಉದ್ಘಾಟನೆ ಸಂಪ್ರದಾಯದಲ್ಲಿ ಮೊದಲಿಗೆ ಸಾಹಿತಿ, ರಂಗಕರ್ಮಿ, ನಟ, ನಿರ್ದೇಶಕ ಗಿರೀಶ ಕಾರ್ನಾಡ, 2015ರಲ್ಲಿ ಮಲಾರ ಪುಟ್ಟಯ್ಯ, 2016ರಲ್ಲಿ ಚನ್ನವೀರ ಕಣವಿ, 2017ರಲ್ಲಿ ಕೆ.ಎಸ್.ನಿಸಾರ್ ಅಹ್ಮದ್, 2018ರಲ್ಲಿ ಡಾ.ಸುಧಾಮೂರ್ತಿ, 2019ರಲ್ಲಿ ಎಸ್.ಎಲ್.ಭೈರಪ್ಪ, 2020ರಲ್ಲಿ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್, 2021ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, 2022ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, 2023ರಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರೆಗೆ ಚಾಲನೆ ನೀಡಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿರುವುದು ಬಹು ವಿಶೇಷ.
ಇದೀಗ ಈ ಸರಣಿಯಲ್ಲಿ ಸಾಹಿತಿ, ಭಾಷಾ ತಜ್ಞ, ಸಂಶೋಧಕ ಹಂಪನಾ ಸೇರಿದ್ದಾರೆ.
ಯಾರಿವರು ಹಂಪನಾ ?
ಹಂಪನಾ ಎಂದರೆ ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ. ಗೌರಿಬಿದನೂರು ತಾಲೂಕಿನ ಹಂಪಸಂದ್ರ ಇವರ ಮೂಲ ಸ್ಥಳ. ಇವರ ತಂದೆ ಪದ್ಮನಾಭಯ್ಯ. ತಾಯಿ ಪದ್ಮಾವತಮ್ಮ. ಹಂಪನಾ ಅವರ ಶಿಕ್ಷಣ ಮೊದಲು ಗೌರಿಬಿದನೂರು, ತುಮಕೂರಿನಲ್ಲಿ ನಡೆಯಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಮಾಡಿದರು. ಎಂ.ಎ ಪದವಿಯನ್ನು ಮೈಸೂರು ವಿವಿಯಿಂದ ಪಡೆದರು.
ಮೈಸೂರು, ಮಂಡ್ಯ, ದಾವಣಗೆರೆ, ಶಿವಮೊಗ್ಗ ಕಾಲೇಜುಗಳಲ್ಲಿ ಇವರು ಬೋಧನಾ ವೃತ್ತಿ ಮಾಡಿದರು. ಆಮೇಲೆ ಬೆಂಗಳೂರು ವಿವಿ ಕನ್ನಡ ಉಪನ್ಯಾಸಕರಾದರು. ಇವರ ಪತ್ನಿ ಕಮಲಾ ಹಂಪನಾ ಕೂಡಾ ಪ್ರಾಧ್ಯಾಪಕಿ ಮತ್ತು ಸಾಹಿತಿಯಾಗಿದ್ದರು ಎಂಬುದು ಸ್ಮರಣೀಯ.
ಕೃತಿ- ಕಾವ್ಯ
ಧನ್ಯಕುಮಾರ ಚರಿತ್ರೆ, ನೇಮಿನಾಥ ಪುರಾಣ, ಶಾಂತಿ ಪುರಾಣ. ಕಾದಂಬರಿ ‘ನಾಗಶ್ರೀ’,ಜಾನಪದ-ಕರ್ನಾಟಕದ ಜಾತ್ರೆಗಳು, ಜಾನಪದ ಕಲಾವಿದರ ಸೂಚಿ, ಪಂಪಭಾರತ ಸಂಗ್ರಹ, ಭರತೇಶ ವೈಭವ- ಇತ್ಯಾದಿ ಇವರ ಕೃತಿಗಳಾಗಿವೆ.
ಕಸಾಪದಲ್ಲೂ ಸೇವೆ:
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸಿದ್ದ ಹಂಪನಾಗೆ ಹತ್ತಾರು ಪ್ರಶಸ್ತಿ ಅಲಂಕರಿಸಿವೆ. ಕಾವ್ಯಾನಂದ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಚಾವುಂಡರಾಯ ಪ್ರಶಸ್ತಿ ಪ್ರಮುಖವಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post