ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೊನ್ನೆ ಮೊನ್ನೆಯಷ್ಟೇ ಕುವೆಂಪು ನಾಟಕಗಳನ್ನು ಹೊಂಗಿರಣೋತ್ಸವ-10ರಲ್ಲಿ ನೋಡಿ ಬಂದ ಮೇಲೆ ನಾ ನೋಡಿದ ಎರಡು ನಾಟಕಗಳ ಕುರಿತಾಗಿ ಬರೆಯಬೇಕೆಂದು ಈ ಲೇಖನ ಆರಂಭಿಸಿದೆ.
ಎಲ್ಲೋ ಹೊರಟಿದ್ದ ನನಗೆ ಅಂದು ನೆನಪಾದದ್ದು ಸುವರ್ಣ ಸಾಂಸ್ಕೃತಿಕ ಭವನದ ‘ನನ್ನ ಗೋಪಾಲ’ ನಾಟಕ. ಈ ನಾಟಕ ಕುವೆಂಪುರವರು ಬರೆದಿರುವ ಎರಡನೇ ಮಕ್ಕಳ ನಾಟಕ. ಒಂಟಿಯಾದ ಹೆಣ್ಣು ಮಗಳು ಶ್ರೀ ಕೃಷ್ಣನನ್ನು ಪೂಜಿಸುತ್ತಾ ಪ್ರತಿಕ್ಷಣ ಅವನನ್ನೇ ನೆನೆಯುತ್ತಾ ದಿನ ಕಳೆಯುತ್ತಾ ಇರುವಾಗ ಆಕೆಯ ಒಬ್ಬನೇ ಮಗ ಗೋಪಾಲ ಶಾಲೆಗೆ ಹೋಗಬೇಕಾಗಿ ಬರುತ್ತದೆ.
ಕಾಡಿನ ದಾರಿಯಲ್ಲಿ ಒಬ್ಬನೇ ಹೇಗೆ ಹೋಗುವುದು ಭಯವಾಗುತ್ತದೆ ಎಂದು ತಾಯಿಗೆ ಕೇಳಿದಾಗ ಅವಳು ಕಾಡಿನಲ್ಲಿ ಗೋಪಾಲನೂ ಸಹ ಇರುತ್ತಾನೆ ಅವನು ನಿಮ್ಮ ಅಣ್ಣ ಎಂದು ತಾಯಿ ಹೇಳಿ ಕಳುಹಿಸುತ್ತಾಳೆ. ಗೋಪಾಲನನ್ನು ಬರುವವರೆಗೂ ಬಿಡದೆ ಕರೆದು ಮಾತಾಡಿಸಿ ಪ್ರತಿನಿತ್ಯ ಅವನೊಂದಿಗೆ ಸ್ವಲ್ಪ ಆಟವಾಡಿಯೇ ಶಾಲೆಗೆ ಹೋಗುವುದು ಆ ಮಗುವಿಗೆ ರೂಢಿಯಾಗುತ್ತದೆ. ಹೀಗಿರಲು ಒಮ್ಮೆ ಗುರುಗಳಿಗೆ ತಮ್ಮ ಮನೆಯಲ್ಲಿನ ಪೂಜೆಗೆ ಏನಾದರೂ ಗುರುದಕ್ಷಿಣೆಯಾಗಿ ತನ್ನಿ ಎಂದಾಗ ಗೋಪಾಲನನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳು ಸಿರಿವಂತರೆ ಆಗಿರುತ್ತಾರೆ ಹಾಗಾಗಿ ಆಯ್ತೆಂದು ಒಪ್ಪಿ ಬೆಲೆಬಾಳುವ ವಸ್ತುಗಳನ್ನೇ ಗುರುಗಳಿಗೆ ದಕ್ಷಿಣೆಯಾಗಿ ತರುತ್ತಾರೆ.
Also Read>> ಶಿವಮೊಗ್ಗ | ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಟಿ. ಪ್ರಕಾಶ್ ಅವಿರೋಧ ಆಯ್ಕೆ
ಗೋಪಾಲ ತಾಯಿಯ ಬಳಿ ಗುರುದಕ್ಷಿಣೆ ಸಲುವಾಗಿ ಕೇಳಿದಾಗ ಅವನು ಕಾಡಿನಲ್ಲಿರುವ ಅಣ್ಣ ಗೋಪಾಲನ ಬಳಿ ಕೇಳಬೇಕೆಂದು ಹೇಳಿ ಕಳುಹಿಸುತ್ತಾಳೆ. ಹೀಗೆ ಸಾಗುವ ಕಥೆ ಮಕ್ಕಳ ನಿರ್ಮಲ ಮನಸ್ಸು ಮುಗ್ಧತೆ ಅದಕ್ಕೆ ದೇವರು ಒಲಿಯುವ ರೀತಿಯನ್ನು ಬಹು ಸುಂದರವಾಗಿ ಕಟ್ಟಿಕೊಟ್ಟಿದೆ.
ಈ ಕಥಾ ಹಂದರವನ್ನೇ ಬಹಳ ಚೆನ್ನಾಗಿ ನಿರ್ದೇಶಕರಾದ ಡಾ. ಸಾಸ್ವೆಹಳ್ಳಿ, ಸತೀಶ್ ರವರು ಶಿವಮೊಗ್ಗದ ವಿವಿಧ ಶಾಲೆಯ ಮಕ್ಕಳನ್ನು ಸೇರಿಸಿ ನಾಟಕವಾಗಿಸಿದ್ದಾರೆ. ಅದಕ್ಕೆ ಪೂರಕವಾದ ರಂಗ ಸಜ್ಜಿಕೆ ಹಾಗೂ ಗಣೇಶ್ ಎಲ್ಲೋರ್ ಅವರ ಸಂಗೀತ. ಅದರಂತೆಯೇ ತನ್ಮಯಿ ಹಾಗೂ ಅನನ್ಯ ಕೂಡ ಹಾಡಿದರು. ನನಗೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಪಾತ್ರವೆಂದರೆ ಗೋಪಾಲನಾಗಿ ಅಭಿನಯಿಸಿದ ಕುಮಾರಸ್ವಾಮಿಯದು. ಅವನು ಮಾತನಾಡುತ್ತಿದ್ದ ರೀತಿ, ಅವನಲ್ಲಿದ್ದ ಮುಗ್ಧತೆ ಅವನ ಅಭಿನಯಕ್ಕೆ ಕಳೆಗಟ್ಟುವಂತಿತ್ತು.
ಇನ್ನು ಲಿಪಿತ ಕೂಡ ಕೃಷ್ಣನಾಗಿ ಮುದ್ದಾಗಿ ಅಭಿನಯಿಸಿದಳು. ಉಳಿದಂತೆ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶಾಲೆಯ ಸನ್ನಿವೇಶವಂತೂ 20 ವರ್ಷ ಹಿಂದೆ ಹೋದಂತಾಯ್ತು. ಒಟ್ಟಾರೆಯಾಗಿ ಒಂದು ಸುಂದರ ಮನೋಲ್ಲಾಸ ಆಯ್ತೆಂದರೆ ತಪ್ಪಾಗಲಾರದು.
Also Read>> ಮನುಷ್ಯರಲ್ಲ ರಾಕ್ಷಸರು | 3 ಹಸುಗಳ ಕೆಚ್ಚಲು ಕೊಯ್ದ ಪಾಪಿಗಳು | ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಮರುದಿನದ ನಾಟಕ ಕುವೆಂಪುರವರ ರಾಮಾಯಣ ದರ್ಶನಂ ಕೃತಿ ಆಧಾರಿತ `ರಾವಣ ದರ್ಶನಂ’. ಇದನ್ನು ರಂಗ ಪಠ್ಯವಾಗಿ ಡಾ.ರಾಜಪ್ಪ ದಳವಾಯಿ ಹಾಗೂ ಡಾ. ಸಾಸ್ವೆಹಳ್ಳಿ ಸತೀಶ್ ರವರು ಚೆನ್ನಾಗಿಯೇ ರೂಪಿಸಿದ್ದಾರೆ. ಹೆಣ್ತನದ ಭೋಗ ಜೀವನದಲ್ಲಿ ಬಿದ್ದಿದ್ದ ರಾವಣನನ್ನು ಮೇಲೆತ್ತಿ ರಾಮ ಜೀವನಕ್ಕೆ ತಿರುಗಿಸುವ ಉದ್ದಾರಕ ಶಕ್ತಿಯಾಗಿ ಸೀತೆ ಅವನ ಜೀವನ ಪ್ರವೇಶಿಸಿರುವುದನ್ನು ಭವ್ಯವಾಗಿ ಚಿತ್ರಿಸಲಾಗಿದೆ.
ಮೇಘನಾದನ ಸಾವಿನ ಸುದ್ದಿ ಕೇಳಿದ ಮಂಡೋದರಿಯ ಮರುಕ, ಅವಳನ್ನು ಸಂತೈಸುವ ರಾವಣ, ಅನಲೆಗಾಗಿ ಮಿಡಿಯುವ, ಧ್ಯಾನ ಮಾಲಿನಿಯ ಕನವರಿಕೆ, ತಾರಾಕ್ಷಿ ದೇವಿಯ ಕೂಸಾದ ವಜ್ರಾರಿಯ ಮೇಲಣ ವಾತ್ಸಲ್ಯ, ಚಂದ್ರನಖಿಯ ಮೇಲಿದ್ದ ರಾವಣನ ಪ್ರೀತಿ ಅಸದಳ. ಇನ್ನು ಲಂಕಾಲಕ್ಷ್ಮೀಯ ಬಳಿ ತನ್ನ ನೋವು ತಿಳಿಸಿ ತನ್ನಿಷ್ಟವ ಬಯಸಿ ಆಶೀರ್ವಾದ ಪಡೆಯುವ ವಿಶಿಷ್ಟ ಸನ್ನಿವೇಶ. ಅಲ್ಲಿ ತನಗೆ ಬೇಕಾದದ್ದು ಎಲ್ಲವಕ್ಕೂ ಲಂಕಾಲಕ್ಷ್ಮೀ `ತಥಾಸ್ತು’ ಎಂದಾಗ ಅಚ್ಚರಿಯಾದ ರಾವಣನಿಗೆ ಅದು ಪುನರ್ಜನ್ಮದಲ್ಲಿ ಎಂದು ಹೇಳುವುದು ವಿಶೇಷವಾಗಿದೆ. ಅಲ್ಲಿ ರಾವಣನನ್ನು ಚಂದ್ರನಖಿ ಮಹಾ ಶಿಲ್ಪಿ ಎನ್ನುತ್ತಲೇ ಅದನ್ನು ಕುವೆಂಪುರವರಿಗೂ ಸಹ ವಿಶಿಷ್ಟ ಕೃತಿ ಕೊರೆಯುವ ಮಹಾಶಿಲ್ಪಿ ಎಂಬಂತೆ ಹೋಲಿಸಿರುವುದು ಈ ನಾಟಕದ ವಿಶೇಷ. ಕೊನೆಯಲ್ಲಿ `ಪಾಪಿ ಗುದ್ದಾರಮಿಹುದೀ ಸೃಷ್ಟಿಯ ಬೃಹತ್ ವ್ಯೂಹ ರಚನೆಯೊಳ್’ ಎಂಬ ಮಾತು ಸಾರ್ಥಕವಾದ ಭಾವ ತರುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಆಡು ಭಾಷೆಯನ್ನೇ ಮಕ್ಕಳು ನೆಟ್ಟಗೆ ಆಡದೆ ಇರುವಾಗ ಹಳೆಗನ್ನಡವನ್ನು ತುಂಬಾ ಸ್ಪಷ್ಟವಾಗಿ ಉಚ್ಚಾರ ಮಾಡಿ ಮಾತನಾಡಿದ್ದಾರೆ. ಇದೊಂದು ಸವಾಲೇ ಸರಿ. ಕುವೆಂಪುರವರು ಹೇಗೆ ಬರೆದಿದ್ದಾರೋ ಅದಕ್ಕೆ ತೂಕವಾಗಿ ಮಾತಾಡಿ ಅಭಿನಯಿಸಿದ್ದಾರೆ. ಅದನ್ನು ನಾವಿಲ್ಲಿ ಶ್ಲಾಘಿಸಲೇಬೇಕು.
ಇತ್ತೀಚಿನ ದಿನಗಳಲ್ಲಿ ಎರಡು ನಿಮಿಷ ನಾಟಕ ನೋಡೋ ಸಂಯಮನೇ ಯಾರಿಗೂ ಇಲ್ಲ. ಒಂದು ಸಣ್ಣ ಗ್ಯಾಪ್’ನಲ್ಲೂ ಮೊಬೈಲ್ ನೋಡ್ಕೊಂಡಿರೋಣ ಅನ್ನೋ ಈ ಕಾಲಘಟ್ಟದಲ್ಲಿ ಹಳೆಗನ್ನಡವನ್ನು ತುಂಬಾ ಸ್ಪಷ್ಟವಾಗಿ ಮಾತಾಡಿ ಅಭಿನಯಿಸಿದ್ದಾರೆ ಅನ್ನುವುದೇ ಒಂದು ವಿಶೇಷ.
ಆಡು ಭಾಷೆಯ ಸಂಭಾಷಣೆಯಾದರೆ ಒಂದು ಡೈಲಾಗ್ ಮರೆತರು ಹೇಳಬಹುದು ಆದರೆ ಇಲ್ಲಿ ಹಾಗಲ್ಲ ಇದನ್ನ ಒಂದು ರಾಗದ ಹಾಗೆ ಅಭ್ಯಾಸ ಮಾಡಿರುತ್ತಾರೆ ಅದನ್ನ ಹಾಗೆ ಹೇಳಬೇಕು ಅದರಲ್ಲಿ ಯಾರೂ ತಪ್ಪಲಿಲ್ಲ ಎಲ್ಲರೂ ಅದನ್ನ ಸರಿಯಾಗಿಯೇ ನೆನಪಿಟ್ಟುಕೊಂಡು ಹೇಳಿದ್ದಾರೆ.
ನಾಟಕದ ವಿಷಯಕ್ಕೆ ಬಂದರೆ ಕಥಾವಸ್ತು ನೋಡಿದಾಗ ‘ರಾವಣ ದರ್ಶನಂ’ ಎಂದಾಗ ರಾವಣ ಎನ್ನುವ ಹೆಸರು ಬಂದಾಗಲೇ ಒಂದು ಅಬ್ಬರ ಇರುತ್ತೆ ಅಂತ ಜನ ಅಂದುಕೊಂಡಿರುತ್ತಾರೆ ಆದರೆ ಇಲ್ಲಿ ಅದು ಭಿನ್ನವಾಗಿತ್ತು. ನಾಟಕ ಆರಂಭವಾಗುವ ಮುನ್ನವೇ ನಿರ್ದೇಶಕರು ಬಂದು ಕಥಾ ಸಂಗತಿಯನ್ನು ಮುನ್ನುಡಿಯ ರೂಪದಲ್ಲಿ ಸ್ವಲ್ಪ ಹೇಳಿ ಹೋಗಿದ್ದು ಅದನ್ನ ಅನುಸರಿಸಿ ಅನೇಕರಿಗೆ ಕಥೆ ಅರ್ಥವಾಗುವಂತಾಯಿತು. ರಾವಣ ಎಂದಾಗ ಜನರಿಗೆ ಎಕ್ಸ್ಪೆಕ್ಟೇಶನ್ ಹೆಚ್ಚು ಇರುತ್ತೆ. ಆದರೆ ನಿರ್ದೇಶಕರು ಆಯ್ದುಕೊಂಡ ವಿಷಯಕ್ಕೆ ತಕ್ಕನಾಗಿ ಎಲ್ಲರೂ ಅಭಿನಯಿಸಿದ್ದಾರೆ. ಇಲ್ಲಿ ರಾವಣ ಎಂದಾಗ ಬರುವ ಕಲ್ಪನೆಗಳಿಗೆ ಕೆಲವೊಂದು ನೀರಸವಾಯಿತು ಎಂದರು.
ಮಕ್ಕಳ ವಿಷಯದಲ್ಲಿ ನೋಡುವುದಾದರೆ ಹಳೆಗನ್ನಡ ಶೈಲಿಯಲ್ಲಿ ಈ ನಾಟಕ ಇರುವುದು ಅವರಿಗೆ ವಾವ್ ಫ್ಯಾಕ್ಟರ್. ಕುವೆಂಪುರವರ ಉತ್ಸವಕ್ಕೆ ಬೇಕಾಗಿದ್ದ ವಾವ್ ಫ್ಯಾಕ್ಟರ್ ಎಂದರೆ ಅದರ ಭಾಷೆಯ ಸದ್ಬಳಕೆ. ಅದನ್ನು ನಿರ್ದೇಶಕರು ತಪ್ಪಿಲ್ಲದ ಹಾಗೆ ನಿರ್ವಹಿಸಿದ್ದಾರೆ. ಅಭಿನಯಿಸುವವರು ಸಹ ಜೊತೆಗೂಡಿದ್ದಾರೆ. ಮೊದಲಿನ ದೃಶ್ಯದಲ್ಲಿ ಪಾತ್ರಧಾರಿಗಳೆಲ್ಲರೂ ಬಂದು `ರಾಮಾಯಣ ದರ್ಶನಂ’ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಹೋಗಿದ್ದುದು ಸೂಚ್ಯವಾಗಿ ಕುವೆಂಪುರವರ ಪಾತ್ರಗಳನ್ನು ನಾವು ವೇದಿಕೆಗೆ ತರ್ತಾ ಇದ್ದೀವಿ ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ.
ಅಭಿನಯದಲ್ಲಿ ಚಂದ್ರನಖಿ ತನ್ನ ಅಭಿನಯ ಹಾಗೂ ಮಾತಿನಿಂದ ಗೆದ್ದರೆ, ರಾವಣ ಲಂಕಾಲಕ್ಷ್ಮೀಯರು ಸಹ ಹಾಗೆಯೇ. ಬಹುಮುಖ್ಯವಾಗಿ ರಂಗ ಸಜ್ಜಿಕೆ, ಬೆಳಕು ಜೊತೆಗೆ ಗಣೇಶ್ ಅವರ ಸಂಗೀತ ಗೆದ್ದಿದೆ. ಎಲ್ಲದಕ್ಕೂ ಕಾರಣರಾದ ಆಯೋಜಕರಾದ ಹೊಂಗಿರಣದ ಸರ್ವರಿಗೂ ಧನ್ಯವಾದಗಳು ಸಲ್ಲಲೇಬೇಕು
(ಚಿತ್ರ ಕೃಪೆ: ಸಿದ್ಧಾರ್ಥ ಎ. ಕಶ್ಯಪ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post