ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪವರ್’ಸ್ಟಾರ್ ಪುನೀತ್ ರಾಜ್’ಕುಮಾರ್ ಚಿತ್ರರಂಗದ ಕದ ತಟ್ಟಲು ಬಯಸುವ ಪ್ರತಿಭಾವಂತರ ಬೆನ್ನಿಗೆ ನಿಂತು ಬೆಳೆಸುವುದರಲ್ಲಿ ಸದಾ ಮುಂದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಸದ್ಯಕ್ಕೆ ಪಿಆರ್’ಕೆ ಆಡಿಯೋದಲ್ಲಿ ಹೊಸ ತಂಡದ ಕಿರುಚಿತ್ರವೊಂದು ಹೊರಬಂದಿದ್ದು ಯೂಟ್ಯೂಬ್’ನಲ್ಲಿ ಸದ್ದು ಮಾಡುತ್ತಿದೆ.
ಅಂದಹಾಗೆ ಪಿಆರ್’ಕೆ ಯೂಟ್ಯೂಬ್ ಚಾನಲ್ ಮೂಲಕ ಹೊರಬಂದಿರುವ ಮೊದಲ ಕಿರುಚಿತ್ರವೂ ಹೌದು. ಸುಮಾರು ಏಳು ದಿನಗಳ ಹಿಂದೆ ’ಮೈ ನೇಮ್ ಈಸ್ ರಾಜು’ ಶೀರ್ಷಿಕೆ ಹೊತ್ತ ಕಿರುಚಿತ್ರ ಪಿಆರ್’ಕೆ ಆಡಿಯೋದಲ್ಲಿ ಬರುವುದಾಗಿ ನಟ ಪುನೀತ್ ಸ್ವತಃ ಟ್ವೀಟ್ ಮಾಡಿದ್ದರು. ಅವರ ಅಭಿಮಾನಿಗಳಲ್ಲಿ ಬಹಳ ಕುತೂಹಲ ಕೆರಳಿಸಿದ್ದ ಈ ಕಿರುಚಿತ್ರ ಮೊನ್ನೆ ಬಿಡುಗಡೆಯಾಗಿದೆ.
ಪತ್ರಗಳ ಹಿಂದಿನ ಕಥೆಯನ್ನು ವಿಭಿನ್ನ ಮತ್ತು ಭಾವನಾತ್ಮಕವಾಗಿ ಯಾವುದೇ ಪಾತ್ರಧಾರಿಗಳ ಸಹಾಯವಿಲ್ಲದೆ ಕೇವಲ ಒಂದು ಪೆನ್ನಿನ ಮೂಲಕ ಕಟ್ಟಿಕೊಡುವ ಈ ಕಿರುಚಿತ್ರ ತಂಡದ ಸೃಜನಾತ್ಮಕ ಚಿಂತನೆಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು. ಬರವಣಿಗೆಯ ಬಗೆಗೆ ಮಾತನಾಡುವ ಕಿರುಚಿತ್ರವೊಂದು ದೃಶ್ಯ ಮಾಧ್ಯಮದಲ್ಲಿ ಬರವಣಿಗೆಯ ಮಹತ್ವವನ್ನು ಹೇಳಿರುವ ರೀತಿ ಅದರ ಜೊತೆ ಜೊತೆಗೆ ಜೀವನ ಪಾಠವನ್ನು ಹೇಳುವ ಪ್ರಯತ್ನ ಮಾಡಿರುವುದು ನಿರ್ದೇಶಕರ ಸೃಜನಶೀಲತೆಗೆ ಹಿಡಿತ ಕೈಗನ್ನಡಿ.
ಅಂದಹಾಗೆ ಈ ಕಿರುಚಿತ್ರದ ಕಥೆಯನ್ನು ನರೇಟ್ ಮಾಡಿರುವವರು ನಟ ಸುನೀಲ್ ರಾವ್. ನಿರ್ದೇಶಕ ಸುಮಂತ್ ಆಚಾರ್ಯ ಅವರು ತಮ್ಮ ಬರವಣಿಗೆಯಲ್ಲಿ ತೋರಿರುವ ಚಮತ್ಕಾರವನ್ನು ತಮ್ಮ ಅದ್ಭುತವಾದ ನರ್ರೇಶನ್ ನಿಂದ ಅಷ್ಟೇ ಸಲೀಸಾಗಿ ಅವರು ನೋಡುಗರಿಗೆ ದಾಟಿಸುತ್ತಾರೆ. ಅವರ ಧ್ವನಿಯೇ ಈ ಕಿರುಚಿತ್ರದ ಆತ್ಮ.
ಉಳಿದಂತೆ ಬದುಕಿನ ಓಟಕ್ಕೆ ಅವಶ್ಯ ಎನಿಸುವ ಆಶಾಭಾವನೆ, ಸಾಧನೆ, ಸಹನೆ, ದೂರದೃಷ್ಟಿ ಎಲ್ಲವನ್ನೂ ಹೆಚ್ಚು ಉಪದೇಶ ಮಾಡದೇ ತಮಾಷೆಯಾಗಿ ತನ್ನದೇ ಕಥೆಯ ಮೂಲಕ ಹೇಳುವ ಒಂದು ಪೆನ್ನು ಈ ಕಿರುಚಿತ್ರದ ಜೀವಾಳ. ಅಂದಹಾಗೆ ಈ ಕಿರುಚಿತ್ರ ಬಿಡುಗಡೆಯಾಗಿ ಇನ್ನೂ ಎರಡು ದಿನ ಕಳೆದಿಲ್ಲ ಆಗಲೇ 85000 ಜನ ವೀಕ್ಷಿಸಿದ್ದು ಯೂಟ್ಯೂಬ್ ನಲ್ಲಿ ಸದ್ಯ ಟ್ರೆಂಡಿಂಗ್’ನಲ್ಲಿದೆ.
ಚಿತ್ರಕ್ಕೆ ಸುಮಂತ್ ಆಚಾರ್ಯ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದು, ಛಾಯಾಗ್ರಹಣ ಮತ್ತು ಸಂಕಲನದ ಹೊರೆಯನ್ನು ಅವರೇ ಹೊತ್ತಿದ್ದಾರೆ. ಹರೀಶ್, ನವೀನ್ ಮತ್ತು ರೋಹಿತ್ ಪ್ರೊಡ್ಯೂಸ್ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post