ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದರ ಜತೆಗೆ ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಮಾಡುತ್ತೇವೆಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದರು.
ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಪೆಸಿಟ್ ಕಾಲೇಜಿನಲ್ಲಿ ಜಿಲ್ಲಾ ಬಿಜೆಪಿಯಿಂದ ಆಯೋಜಿಸಿದ್ದ ಜನಸಭೆ-ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ನಾವು ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬರುವುದಿಲ್ಲ. ದೇಶ, ಧರ್ಮ ರಕ್ಷಣೆ ಮಾಡುತ್ತೇವೆ. ಆ ಮೂಲಕವೇ ಅಧಿಕಾರಕ್ಕೆ ಬರುತ್ತೇವೆ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿರಬಹುದು. ಆದರೆ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ BYVijayendra ಮಾತನಾಡಿ, ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಸೋಲಾಗಿದೆ ಎಂದು ನಮ್ಮ ಪಕ್ಷದ ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ತಿಳಿಸಿ ಹೇಳುವಷ್ಟು ದೊಡ್ಡವನು ನಾನಲ್ಲ. ಅವರು ಸೋಲಿಲ್ಲದ ಸರದಾರರೆಂಬ ಬಿರುದು ಪಡೆದವರು. ಚುನಾವಣೆಯಲ್ಲಿ ಪಕ್ಷ ಸೋತಿದೆ. ಈ ಸಮಯದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸರಿಯಲ್ಲ. ಹಿನ್ನಡೆ ಆಗಿರುವುದನ್ನು ಒಪ್ಪಿಕೊಂಡು ಪಕ್ಷದ ಸಂಘಟನೆಯನ್ನು ಗಟ್ಟಿಗೊಳಿಸಿ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವತ್ತ ಚಿಂತನೆ ನಡೆಸಬೇಕಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ MPRaghavendra ಮಾತನಾಡಿ, ರಚನಾತ್ಮಕವಾಗಿ ಹಾಗೂ ಯಶಸ್ವಿಯಾಗಿ ಪ್ರತಿಪಕ್ಷವಾಗಿ ಹೋರಾಟ ಮಾಡಲಾಗುವುದು. ಮಳೆ ಇಲ್ಲ, ಬಿತ್ತನೆ ಇಲ್ಲ. ರೈತರು ಆತಂಕದಲ್ಲಿದ್ದಾರೆ. ಇನ್ನೂ ಒಂದು ವಾರ, ಹದಿನೈದು ದಿನ ಕಾದು ಆನಂತರ ಗ್ಯಾರಂಟಿ ಯೋಜನೆಗಳ ಜಾರಿಗೆ ತರುವ ಬಗ್ಗೆ ಹೋರಾಟಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.
ಗ್ಯಾರಂಟಿ ಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಭಾಗ್ಯಗಳ ಘೋಷಣೆ ಮಾಡಿರುವ ಕಾಂಗ್ರೆಸ್ ಯೋಜನೆಗಳನ್ನು ಜಾರಿಗೆ ತರಲೇಬೇಕು. ಮುಖ್ಯವಾಗಿ ಖಾಸಗಿ ಬಸ್ ಮಾಲೀಕರ ಜತೆ ಒಪ್ಪಂದ ಮಾಡಿಕೊಂಡು ಅವುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿಗಳ ಈಡೇರಿಕೆಗೆ ಸರ್ಕಾರದ ಮೇಲೆ ಹಕ್ಕೊತ್ತಾಯ ಮಾಡಬೇಕಿದೆ ಎಂದು ಹೇಳಿದರು.
ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ಬಿಜೆಪಿ ಪ್ರತಿ ಬಾರಿ ಸೋಲನ್ನು ಸವಾಲಾಗಿ ಸ್ವೀಕರಿಸಿದೆ. ಇದು ತಾತ್ಕಾಲಿಕ ಕಾಲಘಟ್ಟ. ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಗ್ಗೆ ಚರ್ಚೆ, ವ್ಯಾಖ್ಯಾನಗಳು ನಡೆಯುತ್ತಿವೆ. ಕಾಂಗ್ರೆಸ್ ರಾಜಕೀಯ ಕುತಂತ್ರ ಮಾಡಿದಾಗಲೆಲ್ಲ ಬಡವರು ನೆನಪಾಗುತ್ತಾರೆ. ಇದು ವಿಪರ್ಯಾಸ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಂಬತ್ತು ತುಂಬಿರುವ ಹಿನ್ನೆಲೆಯಲ್ಲಿ ಒಂದು ತಿಂಗಳು ಸಂಘಟನೆ ಚೌಕಟ್ಟಿನಲ್ಲಿ ಪಕ್ಷದಿಂದ ನಾನಾ ಕೆಲಸ ಹಮ್ಮಿಕೊಳ್ಳಲಾಗಿದೆ. ವಿಕಾಸ ತೀರ್ಥ ಯಾತ್ರೆ ಮೂಲಕ ಜನಸೇವೆ ಮುಂದುವರಿಸಬೇಕಿದೆ. ಒಂದೊಂದು ತಾಲೂಕಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಏಳು ತಂಡಗಳು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು ಮೊದಲ ತಂಡದ ಕಾರ್ಯಕ್ರಮ ಶಿವಮೊಗ್ಗದಿಂದಲೇ ಚಾಲನೆ ಸಿಕ್ಕಿದೆ ಎಂದು ಹೇಳಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಮರ್ಥ, ಸಮೃದ್ಧ ಮತ್ತು ಶಕ್ತಿಶಾಲಿ ಭಾರತ ನಿರ್ಮಾಣವಾಗಿದೆ. ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ 370 ಕಾಯ್ದೆ ರದ್ದುಗೊಳಿಸಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದರು. ಇಂತಹ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅವರ ಕಾರ್ಯವನ್ನು ದೇಶದ ಪ್ರತಿಯೊಬ್ಬ ನಾಗರಿಕ ಮೆಚ್ಚಿಕೊಂಡಿದ್ದಾರೆ ಎಂದರು.
ವಿಧಾನಸಭೆ ಚುನಾವಣೆ ಫಲಿತಾಂಶ ಆಕಸ್ಮಿಕ ಅನಾಹುತವಾಗಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಮತೀಯ ಶಕ್ತಿಯನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಲವ್ ಜಿಹಾದ್‌ಗೆ ಪ್ರೋತ್ಸಾಹ ಕೊಡಲು ಕಾಯ್ದೆ ಹಿಂಪಡೆದಿದ್ದು, ತಾಕತ್ತಿದ್ದರೆ ಕಾಂಗ್ರೆಸ್ ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಅರಗ ಜ್ಞಾನೇಂದ್ರ, ಬಿ.ವೈ.ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಮಾಜಿ ಸಚಿವ ಮಧ್ವರಾಜ್, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ.ಅಶೋಕ್ ನಾಯ್ಕ, ಪ್ರಮುಖರಾದ ಗಿರೀಶ್ ಪಟೇಲ್, ಎ.ಎನ್. ನಟರಾಜ್, ಎಸ್.ಟಿ. ಬಳಿಗಾರ್, ಡಾ. ರಾಜನಂದಿನಿ ಕಾಗೋಡು ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post