ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಜನಾಂಗ ಸಮಾಜದ ಭವಿಷ್ಯತ್ತಿನ ಬಗ್ಗೆ ಯೋಚಿಸಿ ಮುನ್ನಡೆಯಬೇಕಾಗಿದ್ದು, ಅದಕ್ಕೆ ಬೇಕಾದ ವೇದಿಕೆಗಳನ್ನು ಹಿರಿಯ ವಿದ್ಯಾರ್ಥಿಗಳಾದ ನಾವು ಕಲ್ಪಿಸೋಣ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ವಿಶಿಷ್ಟ್ ಸೇವಾ ಪದಕ ಪುರಸ್ಕೃತ ಜನರಲ್ ಕ್ಯಾಪ್ಟನ್ ಆರ್.ಎ. ರಂಜನ್ ರಾಮ್ ಅಭಿಪ್ರಾಯಪಟ್ಟರು.
ಶನಿವಾರ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ವತಿಯಿಂದ ಸರ್ಜಿ ಕನ್ವೆನ್ಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾಗತಿಕ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ‘ನೆನಪಿನ ಅಂಗಳ – 2023’ ಉದ್ಘಾಟಿಸಿ ಮಾತನಾಡಿದರು.
ತರಗತಿಗಳಲ್ಲಿ ಕಲಿತ ಪಾಠದ ನೆನಪುಗಳಿಗಿಂತ, ಕ್ಯಾಂಪಸ್ ನಲ್ಲಿ ಕಳೆದ ಅಮೂಲ್ಯ ಕ್ಷಣಗಳೇ ವಿದ್ಯಾರ್ಥಿ ಜೀವನದ ಅಚ್ಚಳಿಯದ ನೆನಪಾಗಿ ಉಳಿದುಬಿಡುತ್ತದೆ. ಶಿವಮೊಗ್ಗದ ಹೆಮ್ಮೆಯನ್ನು ಎತ್ತಿ ಹಿಡಿಯುವ ಜವಾಬ್ದಾರಿ ಇಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳ ಮೇಲಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ. ನಾವು ವಿದ್ಯಾಭ್ಯಾಸ ನಡೆಸುವಾಗ ಎದುರಾಗಿದ್ದ ಕೊರತೆಗಳನ್ನು ಹೊಗಲಾಡಿಸಿ, ಇಂದಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪೂರಕ ವೇದಿಕೆಗಳನ್ನು ನಿರ್ಮಾಣ ಮಾಡೋಣ. ವಿದ್ಯಾರ್ಥಿಗಳು ಕೆಲವೇ ವಿಷಯಗಳ ಸೀಮಿತತೆಗೆ ಒಳಗಾಗುತ್ತಿರುವುದು ಬೇಸರದ ವಿಚಾರ. ವಿದ್ಯಾರ್ಥಿ ಜೀವನದಲ್ಲಿನ ಅನೇಕ ನಾವೀನ್ಯ ಚಿಂತನೆಗಳು ಬದುಕಿನ ಹಾದಿಯಲ್ಲಿ ಸದಾ ಕೈಹಿಡಿಯುತ್ತದೆ ಎಂದು ಕಿವಿಮಾತು ಹೇಳಿದರು.
ಸೈಕಲ್ ಏರಿ ಬರುತ್ತಿದ್ದ ವ್ಯಕ್ತಿತ್ವ ಸ್ಮರಣೀಯ
ನಾವು ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾಗ ಸಂಸ್ಥೆಯ ಅಂದಿನ ಕಾರ್ಯದರ್ಶಿಗಳಾಗಿದ್ದ ನಾಗಪ್ಪ ಶೆಟ್ಟಿಯವರು ಸೈಕಲ್ ಏರಿಬರುತ್ತಿರುವುದು ಕಂಡು ವಿಸ್ಮಿತರಾಗುತ್ತಿದ್ದೆವು. ಯಾವುದೇ ಸೌಲಭ್ಯಗಳನ್ನು ಬಳಸದೆ ಅವರು ತೋರುತ್ತಿದ್ದ ಸರಳತೆ ಸದಾ ಸ್ಮರಣೀಯ ಎಂದು ರಂಜನ್ ರಾಮ್ ಸ್ಮರಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ನೆನಪಿನ ಅಂಗಳ ಕಾರ್ಯಕ್ರಮ ಪ್ರಭಾವಶಾಲಿಯಾಗಿದೆ. ಎನ್ಇಎಸ್ ಸಂಸ್ಥೆ ಅಂತಹ ಮಾನವೀಯ ಮೌಲ್ಯಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಎನ್.ಇ.ಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿದರು. ಜೆ.ಎನ್.ಎನ್.ಸಿ.ಇ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ.ಕೆ.ಎಂ.ಬಸಪ್ಪಾಜಿ, ಉಪಾಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಕಾರ್ಯದರ್ಶಿಗಳಾದ ಡಾ.ಎಸ್.ವಿ.ಸತ್ಯನಾರಾಯಣ, ಸಹ ಕಾರ್ಯದರ್ಶಿಗಳಾದ ಎಂ.ಡಿ.ಸುನಿಲ್, ಸರ್ಜಾ ಸತ್ಯೋದಯ, ಖಜಾಂಚಿಗಳಾದ ಜಿ.ಸುರೇಶ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ :
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಂಬತ್ತು ಹಿರಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಉದ್ಯಮಶೀಲತೆ ಶ್ರೇಷ್ಠತೆಗೆ – ಕೃಪೇಶ್ ಭಟ್
ವೃತ್ತಿಪರ ಶ್ರೇಷ್ಠತೆಗೆ (ಪುರುಷ) – ಪ್ರಶಾಂತ್ ಜಯರಾಮ್, ವಿಜೋ ಮ್ಯಾಥ್ಯೋ
ವೃತ್ತಿಪರ ಶ್ರೇಷ್ಠತೆಗೆ (ಮಹಿಳೆ) – ಸುಷ್ಮಾ.ಆರ್
ಶಿಕ್ಷಣದಲ್ಲಿ ಶ್ರೇಷ್ಠತೆಗೆ – ಡಾ.ಮೈತ್ರಿ.ಸಿ
ತಾಂತ್ರಿಕ ಸಂಶೋಧನೆ ಶ್ರೇಷ್ಠತೆಗೆ – ಪವನ್ ದೇಶಪಾಂಡೆ, ನಿರಂಜನ್ ಎಂ.ಎಂ
ನಾವೀನ್ಯ ಸಂಶೋಧನೆ ಶ್ರೇಷ್ಠತೆಗೆ – ಸಂದೀಪ್ ಸನನ್
ಅಲ್ಮಾ ಮೇಟರ್ ಅಸೋಸಿಯೇಟ್ ಶಿಪ್ ಶ್ರೇಷ್ಠತೆಗೆ – ಸಂಜೀವ್ ಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post