ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವವಿದ್ಯಾಲಯಗಳು ಕಲಿತ ವಿಚಾರಗಳ ವೇಗವರ್ಧಿಸುವ ಕೇಂದ್ರಗಳಾಗಬೇಕು ಎಂದು ಹೈದರಾಬಾದ್‌ನ ಕೇಂದ್ರಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ರಾಮ್‌ರಾಮಸ್ವಾಮಿ ಕರೆ ನೀಡಿದರು.
ಅವರು ಇಂದು ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ 34ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣದಲ್ಲಿ ವಿಶ್ವವಿದ್ಯಾಲಯವು ಸಮಾಜದ ಒಂದು ಭಾಗವಾಗಿ, ಭವಿಷ್ಯದ ರೂಪುರೇಷೆಗಳಿಗಾಗಿ ಅನೇಕ ತಲೆಮಾರುಗಳ ವಿದ್ಯಾರ್ಥಿಗಳಿಗೆ ವಿಚಾರ ಮಾಡಲು ಅನ್ವೇಷಿಸಲು ಹೊಸತನವನ್ನು ಸೃಷ್ಟಿಸಲು ಮತ್ತು ಅವಿಷ್ಕಾರ ಮಾಡಲು ತರಬೇತಿ ನೀಡುವ ಕೇಂದ್ರವಾಗಬೇಕು. ಸಮಾಜ, ಸಂಸ್ಕೃತಿ ಮತ್ತು ಆಸಕ್ತಿಯನ್ನು ಪ್ರೇರೆಪಿಸುವ ಹಾಗೂ ಜೀವನವನ್ನು ಉತ್ತಮಗೊಳಿಸುವ ಸ್ಥಳವಾಗಬೇಕು ಎಂದು ಆಶಿಸಿದರು.
ಜೀವನದಲ್ಲಿ ಪದವಿಗಳು ಒಂದು ಪ್ರಮುಖ ಮೈಲುಗಲ್ಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿರುವ ಈ ವಿಶ್ವವಿದ್ಯಾಲಯವು ಈ ಸ್ಥಳದಿಂದ ಧನ್ಯವಾಗಿದೆ ಎಂದ ಅವರು, ಕರ್ನಾಟಕದ ಸಾಂಸ್ಕೃತಿಕ ಪ್ರತಿಭೆಯ ಫಲವತ್ತಿನ ಮೂಲವಾಗಿರುವ ಈ ಪ್ರದೇಶಕ್ಕೆ ಸೇವೆ ಸಲ್ಲಿಸುವ ತನ್ನ ಗುರಿಯನ್ನು ಈ ವಿಶ್ವವಿದ್ಯಾಲಯ ಪೂರೈಸಿದೆ.
ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಜಗತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪದವಿ ಒಂದು ಸಾಧನವಾಗಿದೆ. ಬದಲಾವಣೆಗೆ ಹೊಂದಿಕೊಳ್ಳಲು ನಿಮ್ಮನ್ನು ಅಣಿಗೊಳಿಸಲು, ಈ ವಿಕಸನಗೊಳುತ್ತಿರುವ ಜಗತ್ತನ್ನು ನಿಭಾಯಿಸಲು ಪದವಿ ಶಿಕ್ಷಣ ಯಶಸ್ವಿಯಾಗಿದೆ ಎಂದು ತಿಳಿಸಿದರು.
Also read: ಶಿಕ್ಷಣವು ವೈಯಕ್ತಿಕ ವಿಕಾಸಕ್ಕೆ ಪ್ರೇರಣೆ ನೀಡುವ ಮಾಧ್ಯಮವಾಗಬೇಕು
ಕೆಲವು ಬದಲಾವಣೆಗಳನ್ನು ನಿರೀಕ್ಷಿಸುವುದು ಕಷ್ಟ ಆದರೆ ವಿದ್ಯಾರ್ಥಿಗಳಿಗೆ ಕೆಲವು ಬದಲಾವಣೆಗಳ ಕಲ್ಪನೆಯಾದರು ಇರಬೇಕು ಎಂದ ಅವರು, ಬದುಕು ನಿಜವಾಗಿಯೂ ಅಮೂಲ್ಯವಾದದ್ದು, ದೊಡ್ಡ ಸಂಖ್ಯೆಯ ಜನಕ್ಕೆ ನೀವು ಮಾಡುವ ಯಾವುದೇ ಕ್ರಿಯೆ ನಿಮ್ಮ ಜೀವನದಲ್ಲಿ ಬದಲಾವಣೆ ತರುತ್ತದೆ. ಆ ಬದಲಾವಣೆ ಸಕರಾತ್ಮಕವಾಗಿರುತ್ತದೆ ಎನ್ನುವ ನಿರೀಕ್ಷೆ ತಮಗಿದೆ ಎಂದರು.
ನೀವು ಪಡೆದ ಶಿಕ್ಷಣ ನಿಮ್ಮ ಮೇಲಿರುವ ಒಂದು ಜವಬ್ದಾರಿ ನೀವು ಪಡೆದ ತರಬೇತಿಯನ್ನು ನಿಮ್ಮ ವೈಯುಕ್ತಿಕ ಒಳಿತಿಗಾಗಿ ಬಳಸಿಕೊಳ್ಳುವುದು ಸಹಜ, ಆದರೆ ಅದರಲ್ಲಿ ಸ್ವಲ್ಪ ಭಾಗವನ್ನು ಸಾರ್ವಜನಿಕ ಒಳಿತಿಗಾಗಿ ಬಳಸಿರಿ ಎಂದು ಸಲಹೆ ನೀಡಿದರು.
ಸಮಾಜಿಕ ಸಮಾನತೆ ಎಲ್ಲರಿಗೂ ಉತ್ತಮ ಆರೋಗ್ಯ, ಉತ್ತಮ ಜೀವನವನ್ನು ಖಾತರಿಪಡಿಸುವಲ್ಲಿ , ನಿಗದಿ ಪಡೆಸಿದ ಗುರಿಗಳನ್ನು ಸಾಧಿಸಲು ಶಿಕ್ಷಣ ಮಾತ್ರ ನಮಗೆ ಸಹಾಯ ಮಾಡುತ್ತದೆ ಎಂದ ಅವರು, ಸಾರಿಗೆ, ಸಂವಾಹನ, ಸಾರ್ವಜನಿಕ ಆರೋಗ್ಯ, ಆರೋಗ್ಯ ಸೇವೆ ಇವೆಲ್ಲವು ಸುಧಾರಿಸಿವೆ. ಆದರೂ ನೀವು ಹೆದರಿಸುವ ಸವಾಲುಗಳು ಅನೇಕ ಇವೆ. ನಮ್ಮ ಪರಿಸರದಲ್ಲಾಗುವ ಅನೇಕ ಬದಲಾವಣೆಗೆ ಜನ ಸಂಖ್ಯೆಯ ಹೆಚ್ಚಳವೇ ಮೂಲ ಕಾರಣವಾಗಿದೆ ಎಂದರು.
ವಾತಾವರಣದ ಇಂಗಾಲದ ಡೈಆಕ್ಸೆಡ್ ಮತ್ತು ಜಾಗತಿಕ ತಾಪಮಾನ ಏರಿಕೆಗೆ ನಾವು ಹೊಂದಿಕೊಂಡು ಬಿಟ್ಟಿದ್ದೇವೆ. ಎಷ್ಟರಮಟ್ಟಿಗೆ ಎಂದರೆ, ಅದರ ಬಗ್ಗೆ ದೂರುವುದಕ್ಕಿಂತ ಹೆಚ್ಚಿನದೇನನ್ನು ನಾವು ಮಾಡುತ್ತಿಲ್ಲ. ಪ್ಲಾಸ್ಟಿಕ್ ಮಾಲಿನ್ಯದ ಹೆಚ್ಚಳ ಮತ್ತು ಈಗ ಅದು ಆಹಾರ ಸರಪಳಿಯನ್ನು ಪ್ರವೇಶಿಸುವ ವಿಧಾನವು ನಮಗೆ ಗೋಚರಿಸುತ್ತಿದ್ದರೂ ಜಾಗೃತರಾಗಿಲ್ಲ ಎಂಬ ವಿಷಾಧ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟಗಳ ಅದ್ಬುತ ಪರಿಸರದಲ್ಲಿ ವಾಸಿಸುತ್ತಿರುವ ನಾವು ಕೆಲವು ಸೂಕ್ಷ್ಮತೆಯ ಬಗ್ಗೆ ಇನ್ನು ನಿರ್ಲಕ್ಷ್ಯ ತಾಳುತ್ತಿದ್ದೇವೆ. ಈ ಪ್ರದೇಶದ ಅಪಾರ ಶಕ್ತಿಯ ಬಗ್ಗೆ ನಾವು ಹೆಚ್ಚು ಜಾಗೃತರಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಇಂದಿನ ಸಣ್ಣ ಬದಲಾವಣೆಗಳು ಭವಿಷ್ಯದಲ್ಲಿ ದೊಡ್ಡ ಪರಿಣಾಮಗಳನ್ನು ಬೀರಬಹುದು. ವಿಶ್ವವಿದ್ಯಾಲಯವು ಪ್ರೋತ್ಸಾಹಿಸುವ ವಿಚಾರಣ ಮನೋಭಾವವನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿ.ವಿ.ಯ ಕುಲಾಧಿಪತಿ ತಾವರ್‌ಚಂದ್ ಗೆಲ್ಹೋಟ್, ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವ ಎ.ಎಲ್.ಮಂಜುನಾಥ್, ಮೌಲ್ಯಾಮಾಪನ ಕುಲಸಚಿವ ಪ್ರೊ.ಗೋಪಿನಾಥ್ ಎಸ್.ಎಂ., ವಿವಿಧ ನಿಕಾಯದ ಡೀನರ್, ವಿಭಾಗಗಳ ಮುಖ್ಯಸ್ಥರು, ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಕಾಗೋಡು ತಿಮ್ಮಪ್ಪ, ಡಾ.ಉನ್ನಿಕೃಷ್ಣನ್, ಡಿ.ನಾಗರಾಜ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post