ಕಲ್ಪ ಮೀಡಿಯಾ ಹೌಸ್ | ಸೊರಬ |
ವಿಶ್ವ ಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ವಿಶ್ವ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ 2ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಹಿನ್ನೆಲೆ ಸೆ.23ರಿಂದ 30ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಗೌರವಾಧ್ಯಕ್ಷ ಸಂಜೀವ ಆಚಾರ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೂ ಸಮಾಜವನ್ನು ಒಗ್ಗೂಡಿಸಲು ಹಾಗೂ ಯುವಕ ಜನತೆಯಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸವನ್ನು ವಿಹಿಂಪ ಮತ್ತು ಬಜರಂಗದಳ ಮಾಡುವಲ್ಲಿ ಸದಾ ನಿರತವಾಗಿದೆ. ಗಣೇಶೋತ್ಸವ ಪ್ರಯುಕ್ತ ಸೆ.23ರಂದು ಸಂಜೆ 6ಕ್ಕೆ ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸೆ. 24ರಂದು ಮಧ್ಯಾಹ್ನ 3ಕ್ಕೆ 10 ವರ್ಷದೊಳಗಿನ ಮಕ್ಕಳಿಗೆ ರಾಧ ಕೃಷ್ಣ ವೇಷ ಕಾರ್ಯಕ್ರಮ, ಸಂಜೆ 6ಕ್ಕೆ ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ, ರಾತ್ರಿ 8ಕ್ಕೆ ಭಜನ ಕಾಯಕ್ರಮ ನಡೆಯಲಿದೆ. ಸೆ. 26ರಂದು ಮಧ್ಯಾಹ್ನ 1ಕ್ಕೆ ಶೌರ್ಯ ಜಾಗೃತ ರಥಯಾತ್ರೆಯು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಿಂದ ಶ್ರೀ ರಂಗನಾಥ ದೇವಸ್ಥಾನದವರೆಗೆ ನಡೆಯಲಿದೆ. ಸೆ.೨೯ರಂದು ಬೆಳಗ್ಗೆ ೯ಕ್ಕೆ ಗಣಹೋಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.
ಸೆ. 30ರಂದು ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯ ಮೇಳಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಶೋಭಾಯಾತ್ರೆ ಮೂಲಕ ನಡೆಯಲಿದ್ದು, ಹಿಂದೂಗಳ ವಿರಾಟ್ ಶಕ್ತಿಯನ್ನು ಈ ಮೂಲಕ ಪ್ರದರ್ಶಿಸಲು ಸರ್ವ ಹಿಂದೂ ಸಮಾಜದವರು ಪಾಲ್ಗೊಂಡು, ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಕಾರಣೀಕರ್ತರಾಗಲು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜೆ. ನಿರಂಜನ್, ಖಜಾಂಚಿ ಶರತ್, ವಿಹಿಂಪ ಕಾರ್ಯದರ್ಶಿ ಚಂದನ್, ಬಜರಂಗದಳದ ಜಿಲ್ಲಾ ಸಹ ಸಂಯೋಜಕ ಶಶಿಕುಮಾರ್, ಪ್ರಮುಖರಾದ ಈರೇಶ್ ಶಂಕ್ರಪ್ಪ, ರಾಘವೇಂದ್ರ ಮಡಿವಾಳ, ಚಂದ್ರಪ್ಪ ಶಿಗ್ಗಾದ್ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post