ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶವು ಸರ್ವತೋಮುಖ ಸಾರ್ವಕಾಲಿಕ ಅಭಿವೃದ್ಧಿಯನ್ನು ಹೊಂದಲು ಯುವ ಸಮೂಹವು ತನ್ನದೇ ಆದ ಅಸಾಧಾರಣ ಕೊಡುಗೆಗಳನ್ನು ನೀಡುವುದು ಅತ್ಯವಶ್ಯಕವಾಗಿದೆ ಎಂದು ಶಿವಮೊಗ್ಗದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ರಮಾನಂದ ಗಾರ್ಗೆ ನುಡಿದರು.
ಉನ್ನತ ಶಿಕ್ಷಣವನ್ನು ಪಡೆಯುವ ನಿಟ್ಟಿನಲ್ಲಿ ಇಂಜಿನಿಯರಿಂಗ್ ವಿಭಾಗವು ತನ್ನದೇ ಆದ ಛಾಪನ್ನು ಸಾಮಾಜಿಕವಾಗಿ ಸೃಷ್ಟಿಸಿದ್ದು ತಾಂತ್ರಿಕ ಕ್ಷೇತ್ರ ಮತ್ತು ಔದ್ಯೋಗಿಕ ಕ್ಷೇತ್ರವು ತಂದೊಟ್ಟುವ ಹೊಚ್ಚ ಹೊಸ ರೀತಿಯ ಸವಾಲುಗಳನ್ನು ತಾರ್ಕಿಕವಾಗಿ ಪ್ರಾಯೋಗಿಕ ಮಟ್ಟದಲ್ಲಿ ಪರಿಹರಿಸುವ ಸಂಶೋಧನೆಗಳನ್ನು ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ದೇಶದ ಯುವ ಸಮೂಹವು ಇಂಜಿನಿಯರಿಂಗ್ ಜೀವನದಲ್ಲಿ ನಾವಿನ್ಯತೆಯಿಂದ ಕೂಡಿದ ಪ್ರಾಯೋಗಿಕ ಚಾಕಚಕ್ಯತೆಯನ್ನು ಅಳವಡಿಸಿಕೊಂಡು ದೇಶದ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪರಿಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪ್ರಮುಖವಾಗಿ ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣದಲ್ಲಿ ದೇಶದ ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಒಟ್ಟಾರೆಯಾಗಿ ಬಂದು ಒಂದು ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯುವ ಅವಕಾಶಗಳು ವಿಪುಲವಾಗಿದ್ದು, ತನ್ಮೂಲಕ ವಿದ್ಯಾರ್ಥಿ ಸಮೂಹದಲ್ಲಿ ಸಂಶೋಧನಾತ್ಮಕ ಚಾಕಚಕ್ಯತೆ, ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಪರಿಹರಿಸುವ ಅಸಾಮಾನ್ಯ ಸಾಮರ್ಥ್ಯವನ್ನು ಸೃಷ್ಟಿಸುವಲ್ಲಿ ಒಂದು ಭದ್ರ ಬುನಾದಿಯಾಗಿ ಇಂಜಿನಿಯರಿಂಗ್ ಶಿಕ್ಷಣವು ಪ್ರಸ್ತುತತೆಯನ್ನು ಪಡೆದಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Also read: ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಐತಿಹಾಸಿಕ ತೀರ್ಮಾನ: ಸಂಸದ ರಾಘವೇಂದ್ರ
ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಆಹ್ವಾನಿತರಾಗಿದ್ದ ಶಿವಮೊಗ್ಗದ ಪಿಇಎಸ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಅನ್ವೇಷಣ ಸಂಸ್ಥೆಯ ನಿರ್ದೇಶಕ ಸುಭಾಷ್ ಮಾತನಾಡಿ, ದೇಶವು ಸರ್ವಾಂಗೀಣ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಯುವ ಸಮೂಹವು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಅದ್ವಿತೀಯ ಕೊಡುಗೆಗಳನ್ನು ನೀಡುವುದು ಎಲ್ಲಾ ಕಾಲಕ್ಕೂ ಪ್ರಸ್ತುತತೆಯನ್ನು ಪಡೆದಿದೆ ಎಂದರು.
ಈ ನಿಟ್ಟಿನಲ್ಲಿ ದೇಶದ ಯುವ ಜನಾಂಗವು ಔದ್ಯೋಗಿಕ, ಕೈಗಾರಿಕಾ, ಶೈಕ್ಷಣಿಕ ಮತ್ತು ತಾಂತ್ರಿಕ ಕ್ಷೇತ್ರವು ತಂದೊಡ್ಡುವ ಸವಾಲುಗಳನ್ನು ಪರಿಹರಿಸುವ ಚಾಕಚಕ್ಯತೆ ಮತ್ತು ಪರಿಹಾರಾತ್ಮಕ ಮನೋಸ್ಥಿತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುವಲ್ಲಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಕಾಲೇಜು ಒದಗಿಸಿರುವ ಎಲ್ಲಾ ರೀತಿಯ ಸವಲತ್ತುಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಉತ್ತುಂಗದ ಮಟ್ಟವನ್ನು ತಲುಪುವಂತೆ ಪ್ರೇರೇಪಿಸಿದರು.
ಇಂಜಿನಿಯರಿಂಗ್ ಶೈಕ್ಷಣಿಕ ಜೀವನದಲ್ಲಿ ಅದ್ವಿತೀಯ ಮಟ್ಟದಲ್ಲಿ ಫಲಿತಾಂಶವನ್ನು ಪಡೆಯುವ ಮೂಲಕ ತಾವು ಕಲಿತ ಎಲ್ಲಾ ವಿಷಯಗಳ ಬಗ್ಗೆ ವೈಚಾರಿಕ ಮನೋ ದೃಷ್ಟಿಯನ್ನು ಬೆಳೆಸಿಕೊಳ್ಳುವ ಮೂಲಕ ತಮ್ಮ ಪೋಷಕರು, ಶಿಕ್ಷಣವನ್ನು ನೀಡಿದ ಪ್ರಾಧ್ಯಾಪಕರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮ್ಮ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಎಲ್ಲರಿಗೂ ಋಣಿಯಾಗಿರುವಂತೆ ತಿಳಿಸಿದರು.
ಪ್ರಮುಖವಾಗಿ ಇಂಜಿನಿಯರಿಂಗ್ ತಾಂತ್ರಿಕ ಶಿಕ್ಷಣವು ಪ್ರಸ್ತುತ ಕಾಲಘಟ್ಟದಲ್ಲಿ ಸಂಪರ್ಕ ಸೇತುವೆಯ ನಿರ್ಮಾಣದಿಂದ ಪ್ರಾರಂಭಗೊಂಡು ಅಂತರಾಷ್ಟ್ರೀಯ ಸ್ಪೇಸ್ ಸ್ಟೇಷನ್ ವರೆಗಿನ ನಿರ್ಮಾಣ ಕಾರ್ಯದಲ್ಲಿ ಅಸಂಖ್ಯಾತ, ಅಸಾಧಾರಣ ಹಾಗೂ ಅದ್ವಿತೀಯ ಕೊಡುಗೆಗಳನ್ನು ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿದ್ದು, ಒಂದು ದೇಶವು ಸಾರ್ವಕಾಲಿಕ ಅಖಂಡತೆಯನ್ನು ಮತ್ತು ಯಶಸ್ಸಿನ ಉನ್ನತ ಶ್ರೇಣಿಯನ್ನು ಪಡೆಯುವಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ ಎನ್ನುವ ವಿಚಾರವನ್ನು ಹಲವಾರು ಪ್ರಾಯೋಗಿಕ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಪೂರ್ತಿಯ ಚಿಲುಮೆಯನ್ನು ಉದ್ಭವಿಸುವಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post