ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರಸ್ತುತ ಕಾಲಘಟ್ಟದ ವಾತಾವರಣ, ಪ್ರಾಕೃತಿಕ ಅಸಮತೋಲನ ಗಮನಿಸಿದರೆ ಕೃಷಿಕ ಅನಿವಾರ್ಯ ಹಾಗೂ ಅಗತ್ಯವಾಗಿ ಸುಸ್ಥಿರ ಕೃಷಿಯತ್ತ ವಾಲಬೇಕಿದೆ. ಸಮಗ್ರ ಕೃಷಿ ಚಿಂತನೆಯ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಸಮಗ್ರ ಕೃಷಿ, ಜೇನು ತಜ್ಞ ತಾಲ್ಲೂಕು ಯಲಸಿ ಗ್ರಾಮದ ಗೌತಮ ಬಿಚ್ಚುಗತ್ತಿ ಹೇಳಿದರು.
ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ರೈತರಿಗೆ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಸಮಗ್ರ ಹಾಗೂ ಸುಸ್ಥಿರ ಕೃಷಿಯಲ್ಲಿ ಜೇನಿನ ಪಾತ್ರ ಹಿರಿದು, ಉತ್ತಮ ಇಳುವರಿಯ ಬೆಳೆಯೊಂದಿಗೆ ಅತ್ಯುತ್ತಮ ಆದಾಯ ನೀಡುವ ಜೇನು ಕೃಷಿಯಿಂದ ಜೀವವೈವಿಧ್ಯತೆಯ ಸಮತೋಲನ, ನಮ್ಮ ಆರೋಗ್ಯದ ಸದೃಢತೆಗೂ ಇವು ನೆರವಾಗುತ್ತವೆ. ಜೇನು ನಮ್ಮ ಆಡಳಿತಗಳು ಕೃಷಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದರು.
Also read: ಕಾಂಗ್ರೆಸ್ ಸರ್ಕಾರಕ್ಕೆ ಸಂವಿಧಾನ, ಸಂಸತ್ತಿನ ಬಗ್ಗೆ ಗೌರವ ಇಲ್ಲ: ಬಸವರಾಜ ಬೊಮ್ಮಾಯಿ
ಕಾರ್ಯಕ್ರಮ ಉದ್ಘಾಟಿಸಿದ ವಿವಿ ವಿಸ್ತರಣಾ ನಿರ್ದೇಶಕ ಡಾ. ಗುರುಮೂರ್ತಿ ಸಮಗ್ರ ಕೃಷಿ ರೈತರ ಬದುಕಿನ ಒಂದು ಭಾಗವಾಗಬೇಕು.ಕೃಷಿಯಲ್ಲಿ ವೈವಿಧ್ಯತೆ ಮತ್ತು ಬಹುಬೆಳೆ ಪದ್ಧತಿ ಮರುಕಳಿಸಬೇಕಾಗಿದೆ, ರೈತರು ಕೃಷಿ ಆರಂಭಿಸುವಾಗ ಸಮಗ್ರ ಕೃಷಿ ನಡೆಸುವ ಬಗ್ಗೆ ಯೋಜನೆ ರೂಪಿಸಿ ಕೊಳ್ಳಬೇಕು. ಈಗಾಗಲೇ ಸಮಗ್ರ ಕೃಷಿ ನಡೆಸುತ್ತಿರುವ ರೈತರ ಕೃಷಿ ಭೂಮಿಗೆ ಭೇಟಿ ನೀಡಿ ಯಶಸ್ಸಿನ ಸಾಧ್ಯತೆಗಳ ವಾಸ್ತವಾಂಶ ತಿಳಿದುಕೊಳ್ಳಬೇಕು. ತಮ್ಮ ಜಮೀನಿನ ವಾತಾವರಣ, ಮಣ್ಣಿನ ಗುಣಮಟ್ಟ ಮತ್ತು ಕೈಗೊಳ್ಳಬೇಕಾದ ಹಂತಗಳ ಬಗ್ಗೆ ದೃಢ ನಿರ್ಧಾರ ಕೈಗೊಳ್ಳಬೇಕು ಎಂದರು.
ಭಾರತೀಯ ಕೃಷಿ ಸಂಶೋಧನಾ ಪರಿಷತ್, ರಾಷ್ಟ್ರೀಯ ಪಶು ರೋಗ ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ ಬೆಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಪ್ರಗತಿಪರ ರೈತ ಸಾಗರ ತಾಲೂಕಿನ ಕೊಪ್ಪ ಗ್ರಾಮದ ಕುಮಾರಸ್ವಾಮಿ, ಶಿವಮೊಗ್ಗ ತಾಲ್ಲೂಕು ಕೊರಗಿ ಗ್ರಾಮದ ಸಾವಯವ ಕೃಷಿಕ ಶ್ರೀಧರ, ಸೊರಬ ಯಲಸಿ ಗ್ರಾಮದ ಜೇನು ಕೃಷಿಕ ಗೌತಮ ಬಿಚ್ಚುಗತ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನಡೆಸಿಕೊಟ್ಟರು.
ವಿವಿಯ ಕುಲಸಚಿವ ಕೆ.ಸಿ.ಶಶಿಧರ, ವಿದ್ಯಾರ್ಥಿ ಕಲ್ಯಾಣ ಡೀನ್ ನಾರಾಯಣ ಎಸ್. ಮಾವಳಕರ, ಕೆನರಾ ಬ್ಯಾಂಕ್ ನಿರ್ದೇಶಕ ಕಾಂತೇಶ, ರೈತ ತರಬೇತಿ ಸಂಸ್ಥೆ ಮುಖ್ಯಸ್ಥ ಡಾ. ಅಶೋಕ, ವಿವಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಅರುಣ್ ಕುಮಾರ್, ಡಾ.ಕೃಷ್ಣಾರೆಡ್ಡಿ, ಡಾ.ಶಶಿಕಲಾ ಉಪಸ್ಥಿತರಿದ್ದರು. ವಿವಿಧ ತಾಲೂಕುಗಳಿಂದ ಆಗಮಿಸಿದ್ದ 60ಕ್ಕೂ ಅಧಿಕ ರೈತರು ಶಿಬಿರದ ಪ್ರಯೋಜನ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post