ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಈ ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅದು ತಾಯಿ. ನಮ್ಮ ಹಿರಿಯರ ಮಾತಿನಂತೆ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಮಾತಿನ ರೀತಿ ದೇವರಿಗೆ ಕೈ ಮುಗಿಯುವ ಮೊದಲು ತಾಯಿಯ ಪಾದಕ್ಕೆ ಎರಗಿ ಮೊದಲ ಹೆಜ್ಜೆಯನ್ನು ಇಡು ಎಂಬ ಮಾತಿದೆ. ತಾಯಿಯಾದವಳು ತನ್ನ ಜೀವನದ ಅದೆಷ್ಟೋ ಸುಖ ಸಂತೋಷಗಳನ್ನು ತನ್ನ ಮಗುವಿಗಾಗಿ ಮುಡಿಪಾಗಿರಿಸಿಕೊಳ್ಳುತ್ತಾಳೆ. ಜೊತೆಗೆ ತಾನು ಕಂಡ ಕನಸುಗಳನ್ನು ತನ್ನ ಮಗುವಿನ ರೂಪದಲ್ಲಿ ತನಗಿದ್ದ ಕನಸುಗಳ ನನಸಾಗಿಸುತ್ತಾಳೆ. ಮಗುವೊಂದರ ಪ್ರತಿಭೆಯನ್ನು ಮೊದಲ ಹೆಜ್ಜೆಯಲ್ಲೇ ಗುರುತಿಸಿ ಆ ಪ್ರತಿಭೆಗೆ ಸೂಕ್ತ ರೂಪುರೇಷೆಯನ್ನು ಕೊಟ್ಟು ಆ ಎಲ್ಲಾ ಪ್ರತಿಭೆಗಳಿಗೆ ಒಂದು ಭದ್ರ ಬುನಾದಿಯನ್ನು ಮಾಡಿಕೊಟ್ಟ ಎಲ್ಲಾ ತಂದೆ ತಾಯಿಗಳಿಗೂ ಆದರ್ಶವಾಗಿ ನಿಲ್ಲಬಲ್ಲ ಇವರು ನಾನು ಇಂದು ನಿಮಗೆ ಪರಿಚಯಿಸುತ್ತಿರುವ ವಿಶ್ವದಾಖಲೆ ವಿಜೇತ ಬಾಲ ಪ್ರತಿಭೆ ಕುಮಾರಿ ಆಧ್ಯ. ಎ ಮತ್ತು ಆಕೆಯ ತಾಯಿ ಪ್ರಿಯಾಂಕ ಗಾಣಿಗ.
ತಂದೆ ಅಶ್ವಿನ್ ಕುಮಾರ್ ತಾಯಿ ಪ್ರಿಯಾಂಕ ಗಾಣಿಗ ಇವರ ಮುದ್ದಿನ ಮಗಳು ಅಧ್ಯ. 2014ರ ಮೇ 12 ರಂದು ಮಂಗಳೂರಿನಲ್ಲಿ ಜನಿಸಿದ ಈ ಪುಟ್ಟ ಮಗುವಿಗೆ ಈಗ 5 ವರುಷ. ತಾಯಿಯ ಮನಸ್ಸಿನ ಮಾತಿನೊಂದಿಗೆ ಮುಂದುವರೆಯುತ್ತದೆ ನನ್ನ ಮುಂದಿನ ಬರಹದ ಸಾಲುಗಳು.
ಮಗಳು ಆಧ್ಯಳಿಗೆ ಆಗ ಎರಡು ವರುಷ ಐದು ತಿಂಗಳು, ಅಂಬೆಗಾಲಿಟ್ಟು ನಡೆಯುತ್ತಿದ್ದ ಮಗಳು ಎದ್ದು ನಿಂತು ನಡೆಯಲು ಪ್ರಯತ್ನಿಸುತ್ತಿದ್ದ ಸಮಯ ಅದು, ತನ್ನ ಪುಟ್ಟ ಮಗುವಿನ ಕೈ ಹಿಡಿದು ನಡೆಸುವ ತಂದೆ ತಾಯಿಗೆ ತನ್ನ ಮಗಳ ಆಟ, ತಂಟೆ, ನಗು, ಅಳು, ನಲಿವುಗಳನ್ನು ನೋಡುವುದೇ ಅತ್ಯಂತ ಸುಮಧುರ ಕ್ಷಣ. ತನ್ನ ಮಗಳಿಗಿದ್ದ ನೃತ್ಯದ ಬಗೆಗಿನ ಆಸಕ್ತಿಯನ್ನು ಸಣ್ಣ ಪ್ರಾಯದಲ್ಲೇ ಗಮನಿಸುತ್ತಾರೆ ಆಕೆಯ ತಾಯಿ.
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ತಾನು ಕೇಳುತ್ತಿದ್ದ ಹಾಡುಗಳಿಗೆ ತನ್ನ ಇಷ್ಟದಂತೆ ಹೆಜ್ಜೆ ಹಾಕುತ್ತಿದ್ದವಳು ಆಧ್ಯ. ಇದನ್ನು ಗಮನಿಸಿದ ತಾಯಿ ಮಗಳನ್ನು ನೃತ್ಯ ತರಗತಿಗೆ ಸೇರಿಸಲು ನಿರ್ಧರಿಸುತ್ತಾರೆ. ವಯಸ್ಸಿನ ಮಿತಿ ಮತ್ತು ಕಾರಣಾಂತರಗಳಿಂದ ತರಗತಿಗೆ ಸೇರಿಸಿಕೊಳ್ಳಲು ಒಪ್ಪದ ನೃತ್ಯ ಗುರುಗಳು ತದನಂತರ ಈ ಪುಟ್ಟ ಮಗುವಿನ ಆಸಕ್ತಿ ಮತ್ತು ತಾಯಿಯ ಹಂಬಲವನ್ನು ಗಮನಿಸಿ ತನ್ನ ತರಗತಿಗೆ ಸೇರಿಸಿಕೊಳ್ಳುತ್ತಾರೆ. ಮುಂದುವರೆದ ದಿನಗಳಲ್ಲಿ ಗುರುಗಳಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ ತನ್ನ ಸಹಪಾಠಿಗಳಿಗೆ ಎಲ್ಲಾ ಪ್ರೀತಿಯ ಆಧ್ಯಳಾಗಿ ಮುಂದುವರೆಯುತ್ತಾಳೆ.
ಸಾಧಿಸುವ ಹಂಬಲ ಇರುವವರಿಗೆ ವಯಸ್ಸಿನ ಮಿತಿ ಎಂಬುದು ಇಲ್ಲ ಎಂಬ ಮಾತಿದೆ. ತನ್ನ ಅತ್ಯಂತ ಸಣ್ಣ ವಯಸ್ಸಿನಲ್ಲಿ ಅತ್ಯಂತ ಉನ್ನತ ಮಟ್ಟದ ಸಾಧನೆ ಮೆಚ್ಚುವಂತದ್ದು ಮತ್ತು ಪ್ರಶಂಸೆಗೆ ಪಾತ್ರವಾಗತಕ್ಕದ್ದು.
ಹುಲ್ಲಾ ಹೂಪ್ ನೃತ್ಯ ಶೈಲಿಯಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಆಧ್ಯ ಮಂಡಿಯೂರಿ 4000 ಸಲ ಮತ್ತು ಸತತವಾಗಿ 34 ನಿಮಿಷಗಳ ಕಾಲ ತಿರುಗಿಸಿದ್ದು ಬಲು ಅಪರೂಪವಾಗಿ ನೋಡ ಸಿಗುವ ಸಾಧನೆ. ಪ್ರಾಯಶಃ ಇದಕ್ಕಾಗಿ ಈಕೆ ಪಟ್ಟ ಪರಿಶ್ರಮ ತೋರಿಸಿದ ಆಸಕ್ತಿ ಮತ್ತು ಅನುಭವಿಸಿದ ಕಷ್ಟ, ಸಾಧಿಸಲು ಅಸಾಧ್ಯವೆಂದು ಕೈಕಟ್ಟಿ ಕುಳಿತುಕೊಳ್ಳುವ ಪ್ರತಿಯೊಬ್ಬರಿಗೂ ಸ್ಪೂರ್ತಿಯ ದಾರಿದೀಪ.
ಬಹುಮುಖ ಪ್ರತಿಭೆ ನಮ್ಮ ಆಧ್ಯ ಜಬರ್’ದಸ್ತ್ ಶಂಕರ ದೇವದಾಸ್ ಕಾಪಿಕಾಡ್ ನಿರ್ದೇಶನದ ತುಳು ಚಲನಚಿತ್ರದಲ್ಲಿ ನಟಿಸಿರುವ ಈಕೆ. ಕಿಶೋರ್ ಡಿ ಶೆಟ್ಟಿ ತಂಡದ ತಿರುಪತಿ ತಿಮ್ಮಪ್ಪೆ ಎಂಬ ತುಳು ನಾಟಕದಲ್ಲೂ ಅಭಿನಯಿಸಿದ್ದಾಳೆ. ಜೊತೆಗೆ ಕನ್ನಡ ಟೆಲಿಫಿಲ್ಮ್ ಗೂಡು ಮುಂತಾದ ಹತ್ತು ಹಲವಾರು ಕಾರ್ಯಕ್ರಮದ ಜೊತೆಗೆ ಹತ್ತು ಹಲವಾರು ಕಡೆ ನೃತ್ಯ ಮತ್ತು ನಾಟಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಸಾಲು ಸಾಲು ಪ್ರಶಸ್ತಿಗಳು ಇವಳ ಸಾಧನೆಯನ್ನು ಮೆಚ್ಚಿ ಈಗಾಗಲೇ ಈಕೆಗೆ ಲಭಿಸಿವೆ. ಅವುಗಳಲ್ಲಿ ತೌಳವ ಕುಮಾರಿ ಪ್ರಶಸ್ತಿ-2019, ಕರ್ನಾಟಕ ಚೇತನ ರಾಜ್ಯ ಪ್ರಶಸ್ತಿ-2019, ಡಾನ್ಸ್ ಸಿಂಗ್ ಸ್ಟಾರ್ 2019, ಕಾಸರಗೋಡು ದಸರಾ ಪ್ರಶಸ್ತಿ-2019, ಕರ್ನಾಟಕ ಸೌರಭ ರತ್ನ ಹೀಗೆ ಸುಮಾರು 90ಕ್ಕೂ ಅಧಿಕ ಪ್ರಶಸ್ತಿಗಳು ಮತ್ತು 100 ಕ್ಕೂ ಹೆಚ್ಚಿನ ಕಾರ್ಯಗಳಲ್ಲಿ ಭಾಗವಹಿಸಿರುವ ಈ ಬಾಲ ಪ್ರತಿಭೆಯನ್ನು ವಿದ್ಯಾರ್ಥಿಗಳ ಜೀವನಕ್ಕೆ ಪ್ರೇರಣೆ ಸಿಗಲಿ ಎಂಬ ಉದ್ದೇಶದಿಂದ 15 ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಇವಳನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತಾರೆ.
ಜಗದ ಒಡೆಯ ಶ್ರೀ ಕೃಷ್ಣನ ಭಕ್ತೆಯಾಗಿರುವ ಇವಳಿಗೆ ಕೃಷ್ಣ ನ ವೇಷ ಧರಿಸುವುದು ಎಂದರೆ ಬಲು ಅಚ್ಚುಮೆಚ್ಚು, ಜೊತೆಗೆ ತಂದೆ ತಾಯಿ ಗುರುಹಿರಿಯರ ಮೇಲೆಯೂ ಅಷ್ಟೇ ಭಕ್ತಿ, ಪ್ರೀತಿ, ವಿಶ್ವಾಸ. ಈ ಪ್ರಪಂಚದ ಬೆಳಕನ್ನು ಕಂಡ ಪ್ರತಿಯೊಂದು ಮನುಷ್ಯನಿಗೂ ಆ ಪರಮಾತ್ಮ ತನ್ನದೇ ಆದ ಶಕ್ತಿ ಮತ್ತು ಪ್ರತಿಭೆ ಮತ್ತು ಗುಣಗಳನ್ನು ಕೊಟ್ಟಿರುತ್ತಾನೆ. ಜೊತೆಗೆ ಅದನ್ನು ಪರಿಚಯಿಸಲು ತಂದೆ ತಾಯಿ ಗುರು ಹಿರಿಯರನ್ನು ನಮ್ಮ ಜೊತೆಗೆ ಸೃಷ್ಟಿಸಿದ್ದಾನೆ. ಇವರೆಲ್ಲರ ಶುಭ ಹಾರೈಕೆಯೊಂದಿಗೆ ಉತ್ತಮ ಮಾರ್ಗದಲ್ಲಿ ನಡೆದು ವಿಶ್ವವೇ ಮೆಚ್ಚುವ ಪ್ರತಿಭೆಯಾಗು ಎನ್ನುವ ಹಂಬಲದೊಂದಿಗೆ.
Get in Touch With Us info@kalpa.news Whatsapp: 9481252093
Discussion about this post