ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀಕೃಷ್ಣ ಅರ್ಜುನನ ಮನಸ್ಸನ್ನು ಬದಲಿಸುತ್ತಾನೆ. ಕೆಳಗಿಳಿಸಿದ ಅವನ ಗಾಂಢೀವವನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡುತ್ತಾನೆ. ಕೃಷ್ಣನಿದ್ದೆಡೆಗೆ ಅದೃಷ್ಟ, ಯಶಸ್ಸು, ಸ್ಥಿರತೆ, ಕಾನೂನು, ಪರಮಾಧಿಕಾರ ಎಲ್ಲವೂ ತಾನಾಗಿಯೇ ನೆಲೆಗೊಳ್ಳುತ್ತದೆ (ಭಗವದ್ಗೀತೆ 18ನೇ ಅಧ್ಯಾಯ, 78ನೇ ಶ್ಲೋಕ) ಎನ್ನುತ್ತಾನೆ. ಈ ಹಂತದಲ್ಲಿ ನಾವು ಎರಡು ವಿಭಿನ್ನ ದೃಷ್ಟಿಕೋನವನ್ನು ಕಾಣಬಹುದು. ಕೃಷ್ಣನ ಮಾತುಗಳಲ್ಲಿ ದೃಢತೆಯಿದೆ. ಅದರಲ್ಲಿ ಯಾವುದೇ ಒತ್ತಡವಿಲ್ಲ. ಆದರೆ ಸಂಜಯನ ಮಾತುಗಳು ಲೋಕಾಭಿರಾಮವಾಗಿದೆ. ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಅರ್ಜುನ ನನ್ನಲ್ಲಿ ನೀನು ದೃಢವಾದ ವಿಶ್ವಾಸವನ್ನಿಡು.
ರಣಭೂಮಿಯಲ್ಲಿ ವೀರಯೋಧನಂತೆ ಕಾದಾಡು. ನಿನ್ನ ಹೋರಾಟ ಪರರಿಗೆ ಹಿತವಾಗುವಂತಿರಲಿ. ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸಬೇಡ. ಆಗ ನಿನಗೆ ಮೋಕ್ಷವನ್ನು ನಾನು ಕರುಣಿಸುತ್ತೇನೆ ಎಂದು ಅಭಯವನ್ನು ನೀಡುತ್ತಾನೆ.
ಆದರೆ ಶ್ರೀಕೃಷ್ಣನ ಮಾತುಗಳನ್ನು ಸಂಜಯ ಅರ್ಥೈಸಿಕೊಳ್ಳುವ ರೀತಿಯೇ ಬೇರೆಯಾಗಿದೆ. ಆತ ಕೃಷ್ಣನ ಮಾತಿನಲ್ಲಿ ಮಾತಿನಲ್ಲಿ ಐದು ರೀತಿಯ ಭರವಸೆಗಳನ್ನು ಕಾಣುತ್ತಾನೆ. ಅವೆಂದರೆ, ಅದೃಷ್ಟ (ಸಂಪತ್ತು), ಯಶಸ್ಸು (ವಿಜಯ), ಅಧಿಕಾರ (ಭು), ಸ್ಥಿರತೆ (ಧ್ರುವ) ಮತ್ತು ಕಾನೂನು (ನೀತಿ).
ಇಲ್ಲೊಂದು ಅಂಶವನ್ನು ನಾವು ಗಮನಿಸಬೇಕು. ಅರ್ಜುನನ ಸಮಸ್ಯೆ ಅವನಿಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಶ್ರೀಕೃಷ್ಣ ನೀಡುವ ಪರಿಹಾರದಿಂದ ಅವನಿಗೆ ಜ್ಞಾನೋದಯವಾಗುತ್ತದೆ. ಅವನೀಗ ಬೇರೆಯವರ ಬಗ್ಗೆಯೂ ಚಿಂತಿಸಲು ಪ್ರಾರಂಭಿಸುತ್ತಾನೆ. ಆದರೆ ಸಂಜಯನ ದೃಷ್ಟಿಕೋನ ಸಂಕುಚಿತವಾಗಿರುವುದಿಲ್ಲ. ಅವನ ಗಮನವೆಲ್ಲ ಇಡೀ ಹಸ್ತಿನಾಪುರದ ಜನರ ಕ್ಷೇಮದತ್ತ ನೆಟ್ಟಿರುತ್ತದೆ. ಪಾಂಡವರು ಮತ್ತು ಕೌರವರ ನಡುವಿನ ಯುದ್ಧದಲ್ಲಿ ಪರಸ್ಪರ ಹಿತಾಸಕ್ತಿಯೇ ಮೇಲ್ಪಂಕ್ತಿಯಾಗಿರುತ್ತದೆಯೇ ಹೊರತು ಸಂಜಯನ ವಿಚಾರಧಾರೆ ಅಲ್ಲಿ ನಗಣ್ಯವಾಗಿರುತ್ತದೆ.
ಸಂಜಯನ ದೃಷ್ಟಿಕೋನ
ಸಂಜಯನ ದೃಷ್ಟಿಯಲ್ಲಿ ಗೀತೋಪದೇಶ ಮುಂದೆ ದೇಶವನ್ನು ಆಳಬಲ್ಲ, ದೇಶದ ಚುಕ್ಕಾಣಿ ಹಿಡಿಯಬಲ್ಲ, ಜನರ ಯೋಗಕ್ಷೇಮಕ್ಕಾಗಿ ತಾವು ವಹಿಸಬೇಕಾದ ಕರ್ತವ್ಯವನ್ನು ಎಚ್ಚರಿಸುವುದಕ್ಕೋಸ್ಕರವಾಗಿ ರೂಪಗೊಂಡಿದೆಯೇ ಹೊರತು ಸ್ವಾರ್ಥಲಾಲಸೆಗಾಗಿ ಯುದ್ಧಭೂಮಿಯನ್ನೇ ವೇದಿಕೆ ಮಾಡಿಕೊಂಡವರಿಗಲ್ಲ. ಈ ಅಂಶವನ್ನೇ ಸಂಜಯ ಧೃತರಾಷ್ಟ್ರನಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಾನೆ. ಇನ್ನಾದರೂ ನಿನ್ನ ಸ್ವಾರ್ಥಾಲೋಚನೆಯನ್ನು ಬಿಡು, ಬೇರೆಯವರ ಹಿತದೃಷ್ಟಿಯ ಬಗ್ಗೆ ಚಿಂತಿಸು ಎಂದು ತಿಳಿ ಹೇಳುತ್ತಾನೆ.
ರಾಜನಾದವನು ಹೇಗಿರಬೇಕು?
ಸಂಜಯನ ದೃಷ್ಟಿಕೋನದಲ್ಲಿ ವೈಷ್ಣವ ತತ್ತ್ವವಿದೆ. ಆ ಕಾರಣದಿಂದಲೇ ಭಗವಾನ ವಿಷ್ಣುವಿನ ಹೆಸರನ್ನು ಪ್ರತಿಪಾದಿಸುವ ಶ್ರೀ ಮತ್ತು ಭೂಃ ಎನ್ನುವ ಪದ ಬಳಕೆಯಾಗಿದೆ. ಇಲ್ಲಿ ವಿಷ್ಣುವೇ ಯಶಸ್ಸಿನ ಸಂಕೇತವಾಗುತ್ತಾನೆ. ವಿಷ್ಣುವೇ ಬ್ರಹ್ಮಾಂಡದ ಅಧಿಪತಿಯಾಗಿದ್ದಾನೆ. ತನ್ನೊಡತಿಯರಾದ ಶ್ರೀ (ಲಕ್ಷ್ಮಿ) ಮತ್ತು ಭೂ (ಭೂಮಿ) ಯೊಂದಿಗೆ ವಿರಾಜಮಾನನಾಗಿದ್ದಾನೆ.
ಇಲ್ಲಿ ಶ್ರೀ ಎಂದರೆ ಸಂಪತ್ ಪ್ರದಾಯಿನಿ, ಅಷ್ಟೈಶ್ವರ್ಯಗಳನ್ನು, ಸಕಲ ಭೋಗಗಳನ್ನು ಕರುಣಿಸುವವಳು ಎಂದಾಗುತ್ತದೆ. ಭೂ ಎಂದರೆ ಭೂದೇವಿ. ಸಕಲ ಜೀವಿಗಳಿಗೂ ಆಶ್ರಯದಾತೆ ಮತ್ತು ಖನಿಜ ಸಂಪತ್ತಿನ ಒಡತಿ ಎಂದು ಅರ್ಥೈಸಿಕೊಳ್ಳಬಹುದು.
ಧ್ರುವ ಮತ್ತು ನೀತಿ ವಿಷ್ಣುವಿನ ಪರಮಾಪ್ತ ಭಕ್ತರು. ಉತ್ತರ ದಿಕ್ಕಿನಲ್ಲಿ ಪ್ರಕಾಶಿಸುವ ನಕ್ಷತ್ರವೇ ಧ್ರುವ. ಧ್ರುವನಿಗೋ ವಿಷ್ಣುವಿನ ತೊಡೆಯ ಮೇಲೆ ಕುಳಿತುಕೊಳ್ಳುವಾಸೆ. ಯಾವುದೇ ಕಾರಣಕ್ಕೂ ವಿಷ್ಣುವಿನ ತೊಡೆಯಿಂದ ಕೆಳಗೆ ಇಳಿಯದೆ ತನ್ನ ತಂದೆಯ ಪ್ರೀತಿಯನ್ನು ಅನೂಚಾನವಾಗಿ ಪಡೆಯಬೇಕೆಂಬುದು ಅವನಾಸೆ.
ನೀತಿ ಅಂದರೆ ಕಾನೂನು ಎಂದರ್ಥ. ಆತ ತನ್ನತನವನ್ನು ಭಗವಾನ್ ವಿಷ್ಣುವಿಗೇ ಸಮರ್ಪಿಸುತ್ತಾನೆ. ಅದುವೇ ಧರ್ಮವೆಂದು ಭಾವಿಸುತ್ತಾನೆ. ಅಂತಹ ವಿವೇಚನಾಯುಕ್ತ ನ್ಯಾಯವೇ ನಿಜವಾದ ಧರ್ಮ. ಅದರಿಂದ ಎಲ್ಲರಿಗೂ ನ್ಯಾಯ ಸಲ್ಲಿಕೆಯಾಗುತ್ತದೆ. ಧರ್ಮವಿಲ್ಲದ ನ್ಯಾಯಕ್ಕೆ ಬೆಲೆಯಿಲ್ಲ, ಅದು ಕೇವಲ ದಂಡನೆ, ದಬ್ಬಾಳಿಕೆ ಮತ್ತು ನಾಶಗೊಳಿಸುವಿಕೆಯ ಸಂಕೇತವಾಗಬಹುದು. ಈ ವಿಚಾರದಲ್ಲಿ ನಮಗೆ ರಾಮಾಯಣ ಮತ್ತು ಮಹಾಭಾರತದ ಘಟನಾವಳಿಗಳೇ ನಿದರ್ಶನವಾಗಬೇಕು. ಆ ದಿನಗಳಲ್ಲಿ ಬಾಂಧವ್ಯವು ಎಷ್ಟರ ಮಟ್ಟಿಗೆ ವಿಸ್ತತವಾಗಿತ್ತು. ಆ ಬಾಂಧವ್ಯದಲ್ಲಿ ಎಲ್ಲ ಸಮುದಾಯದವರೊಂದಿಗೆ ಸಹಭಾಳ್ವೆ ನಡೆಸಲಾಗುತ್ತಿತ್ತು. ಆ ಕಾರಣದಿಂದಲೇ ರಾಮಾಯಣದಲ್ಲಿ ಇಕ್ಷ್ವಾಕು ವಂಶಸ್ಥರ ಜತೆ ಜತೆಗೆ ವಾನರರು, ರಾಕ್ಷಸರು ಪ್ರಧಾನವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಮಹಾಭಾರತದ ವಿಷಯ ಹಾಗಲ್ಲ. ಒಂದೇ ವಂಶದ ಎರಡು ಕುಡಿಗಳ ನಡುವಿನ ದ್ವೇಷವನ್ನು ಪ್ರತಿನಿಧಿಸುತ್ತದೆ. ಆಸ್ತಿಯ ಮೇಲೆ ಆಧಿಪತ್ಯ ಸಾಧಿಸುವ ಸಲುವಾಗಿ ಅವರೀರ್ವರ ನಡುವೆ ಕದನವಾಗುತ್ತದೆ. ರಾಮಾಯಣದಲ್ಲಿ ಅಯೋಧ್ಯೆ, ಕಿಷ್ಕಿಂದಾಕಾಂಡವೇ ಪ್ರಮುಖವಾದರೆ ಮಹಾಭಾರತದಲ್ಲಿ ಹಸ್ತಿನಾಪುರವೇ ಮುಖ್ಯ ಭೂಮಿಕೆಯಾಗುತ್ತದೆ. ರಾಜನಾದವನು ಸ್ವಹಿತಾಸಕ್ತಿ ಹಾಗೂ ಲೋಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕು.
ಕುರುಕುಲದ ಒಂದೇ ಕುಟುಂಬದ ಎರಡು ಕವಲುಗಳೊಳಗೆ ಹುಟ್ಟಿದ ಸಂಘರ್ಷದ ಕಥೆಯೇ ಮಹಾಭಾರತ. ಎರಡೂ ಮಹಾಕಾವ್ಯಗಳಿಗೆ ಕಾರಣವಾಗಿದ್ದು ಆಸ್ತಿ ವಿಚಾರ, ಅಯೋಧ್ಯಾ, ಕಿಷ್ಕಿಂದ ಹಾಗೂ ಲಂಕಾದ ಸಿಂಹಾಸನ ರಾಮಾಯಣದ ಕಥೆಯಾದರೆ, ಹಸ್ತಿನಾಪುರದ ಸಿಂಹಾಸನಕ್ಕೆ ನಡೆದ ಯುದ್ಧದಿಂದಾಗಿ ಮಹಾಭಾರತ ಕಥೆ ಹುಟ್ಟಿಕೊಳ್ಳುತ್ತದೆ ರಾಜಧರ್ಮದ ಪ್ರಕಾರ ರಾಜನಾದವನು ತನ್ನವರ ಹಿತಾಸಕ್ತಿ ಕಾಪಾಡಿಕೊಳ್ಳುವುದರ ಜತೆ ಜತೆಗೆ ಪರರ ಹಿತದೃಷ್ಟಿಯತ್ತಲೂ ಗಮನ ಹರಿಸಬೇಕು. ಈ ದೃಷ್ಟಿಯಲ್ಲಿ ಕಂಡಾಗ ತನ್ನ ಆಸೆ, ಆಕಾಂಕ್ಷೆಗಳನ್ನೇ ಬದಿಗೊತ್ತಿದ ಶ್ರೀರಾಮ ಆದರ್ಶನಾಗುತ್ತಾನೆ. ಆದರೆ ಶ್ರೀಕೃಷ್ಣನದು ರಾಜತಾಂತ್ರಿಕ ದೃಷ್ಟಿ. ಸಮರವೆನ್ನುವುದು ದ್ವೇಷ ಸಾಧನೆ ಮತ್ತು ಮಹತ್ವಾಕಾಂಕ್ಷೆಯ ಭೂಮಿಕೆಯಾಗಬಾರದು. ಬದಲಿಗೆ ಅದುವೇ ಸಮರ್ಥ ಆಡಳಿತದ ಸಾಧನ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡುತ್ತಾನೆ.
ಸಮಸ್ಯೆ ಬಂದಾಗ ಮನಸ್ಸಿನಲ್ಲೇ ಕೊರಗುವುದಕ್ಕಿಂತ ಉತ್ತರ ಕಂಡುಕೊಳ್ಳಲು ಯೋಗ್ಯರ ಮುಂದೆ ಪ್ರಸ್ತಾಪಿಸಬೇಕು ಎನ್ನುತ್ತದೆ ಭಗವದ್ಗೀತೆ. ವೇದಾಂತದ ಗಹನ ತತ್ತ್ವಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬೋಧಿಸಿದ್ದು ಗೀತೆಯ ಮೊದಲ ವಿಶೇಷತೆಯಾದರೆ, ಸರ್ವಜನಗ್ರಾಹ್ಯವಾದ ಅನೇಕ ಲೌಕಿಕ ವಿಷಯಗಳನ್ನು ಸಾಂದರ್ಭಿಕವಾಗಿ ಬೋಧಿಸಿದ್ದು ಅದರ ಎರಡನೆಯ ವಿಶೇಷತೆ. ಹಾಗೆಂದೇ ಗೀತೆ ಎಲ್ಲ ಆಯಾಮಗಳಿಂದಲೂ ಜನಪ್ರಿಯವಾಗಿದೆ.
ಮೂವರು ಕೃಷ್ಣರು
ಭಗವದ್ಗೀತೆ ಎಂದರೆ ಮೂವರು ಕೃಷ್ಣರ ಸಂಗಮ. ಇದನ್ನು ಉಪದೇಶಿಸಿದವನು ವಾಸುದೇವಕೃಷ್ಣ. ಉಪದೇಶವನ್ನು ಪಡೆದವನು ಅರ್ಜುನ. ಅವನೂ ಕೃಷ್ಣನೇ. ಮಹಾಭಾರತದ ವಿರಾಟಪರ್ವದಲ್ಲಿ ಅರ್ಜುನ ಉತ್ತರಕುಮಾರನ ಬಳಿ ತನ್ನ ಹತ್ತು ಹೆಸರುಗಳಲ್ಲಿ ಕೃಷ್ಣ ಎಂಬುದೂ ಒಂದು ಎಂದಿದ್ದಾನೆ. ಪಾಂಡು ಮಹಾರಾಜ ಅರ್ಜುನನಿಗೆ ಕೃಷ್ಣ ಎಂದೇ ನಾಮಕರಣ ಮಾಡಿದ್ದ. ಈ ಇಬ್ಬರ ಸಂವಾದವನ್ನು ತನ್ನ ಶಬ್ದಗಳಿಂದ ಸೆರೆಹಿಡಿದು ಮಾತಿಗೆ ಅಕ್ಷರದ ಉಡುಗೆ ತೊಡಿಸಿ ಗ್ರಂಥರೂಪದಲ್ಲಿ ಲೋಕಕ್ಕೆ ಕೊಟ್ಟವನೂ ಕೃಷ್ಣ. ಅವರೇ ದ್ವೈಪಾಯನಕೃಷ್ಣ. ಅವರೇ ವ್ಯಾಸರು.
ಈ ಅಭಿಪ್ರಾಯವನ್ನು ಹೀಗೂ ಹೇಳಬಹುದು- ಒಬ್ಬ ಕೃಷ್ಣನು ಮನೋರೋಗಿ. ಇನ್ನೊಬ್ಬ ಕೃಷ್ಣನು ಆ ಮನೋರೋಗಕ್ಕೆ ಮದ್ದು ಕೊಡುವ ವೈದ್ಯ. ಮತ್ತೊಬ್ಬ ಕೃಷ್ಣನು ಈ ಚಿಕಿತ್ಸಾ ವಿಧಾನವನ್ನು ಸಂಗ್ರಹಿಸಿ ದಾಖಲು ಮಾಡಿದವನು. ಅದಕ್ಕಿಂತ ಹೆಚ್ಚುಗಾರಿಕೆ ಇನ್ನೇನಿದೆ.
ಅರ್ಜುನನ ವಿಷಾದ
ಅರ್ಜುನ ಸ್ವ-ಇಚ್ಛೆಯಿಂದಲೇ ಯುದ್ಧ ಮಾಡಲು ಮುಂದಾಗಿದ್ದ. ಯುದ್ಧಭೂಮಿಯಲ್ಲಿ ಎರಡು ಸೇನೆಗಳ ನಡುವೆ ರಥವನ್ನು ನಿಲ್ಲಿಸುವಂತೆ ಕೃಷ್ಣನಿಗೆ ಸೂಚಿಸಿದ. ಅದರಂತೆ ಕೃಷ್ಣನು ಭೀಷ್ಮ-ದ್ರೋಣ ಮೊದಲಾದವರ ಮುಂಬದಿಯಲ್ಲಿ ರಥವನ್ನು ನಿಲ್ಲಿಸಿದ. ಎರಡೂ ಬದಿಯ ಸೇನೆಯತ್ತ ದೃಷ್ಟಿಹಾಯಿಸಿದ ಅರ್ಜುನನ ಮನಸ್ಸಿನಲ್ಲಿ ಸುಪ್ತವಾಗಿದ್ದ ವ್ಯಥೆ ಉಲ್ಬಣವಾಯಿತು. ಸ್ಮತಿಯ ಕಾರಣ ಇವರೆಲ್ಲರೂ ನನ್ನವರು. ನನ್ನಿಂದಾಗಿ ಸಾಯುತ್ತಾರಲ್ಲ ಎಂದು ವ್ಯಥಿತನಾದ. ಅರ್ಜುನನು ಕೌರವಾದಿಗಳನ್ನು ನನ್ನವರು ಎನ್ನುತ್ತಾನೆ. ಆದರೆ, ನಾನು ಎಂಬುದನ್ನು ಅರಿತವನು ಮಾತ್ರ ನನ್ನವರು ಎಂಬುವವರನ್ನೂ ತಿಳಿಯಬಲ್ಲ. ಇಲ್ಲದಿದ್ದರೆ ಅದು ರೋಗಗ್ರಸ್ಥ ಯೋಚನೆಯಾಗುತ್ತದೆ. ಅಂತಹ ಯೋಚನೆ ಮನೋರೋಗವಲ್ಲದೇ ಮತ್ತೇನು? ಹೀಗೆ ಮನೋವ್ಯಥೆಯಿಂದ ನಿತ್ರಾಣಗೊಂಡ ಅರ್ಜುನ ಹುರುಪು ಕಳೆದುಕೊಳ್ಳುತ್ತಾನೆ. ಮೋರೆ ಬಾಡುತ್ತದೆ. ಕಾಯ ಕಂಪಿಸಿ ಕೈಯಿಂದ ಗಾಂಡೀವ ಧನಸ್ಸು ಜಾರುತ್ತದೆ. ತನಗೆ ಹೀಗೇಕೆ ಆಗುತ್ತಿದೆ ಎಂದು ತಿಳಿಯದ ಅರ್ಜುನ ಕೃಷ್ಣನಲ್ಲಿ ಕಾರ್ಪಣ್ಯದೋಷೋಪಹತಃ ಸ್ವಭಾವಃ ಎನ್ನುತ್ತಾನೆ.
ಕೃಷ್ಣ! ನನ್ನಲ್ಲಿ ದೈನ್ಯತೆ ಉಂಟಾಗಿ ಕ್ಷತ್ರಿಯ ಸ್ವಭಾವ ಮರೆಯಾಗುತ್ತಿದೆ. ಕರ್ತವ್ಯ ವಿಷಯದಲ್ಲಿ ಮನಸ್ಸಿಗೆ ಮಬ್ಬು ಕವಿದಿದೆ. ಆದ್ದರಿಂದ ನನಗೆ ಯಾವುದು ಶ್ರೇಯಸ್ಸು? ಯಾವುದು ಶ್ರೇಯಸ್ಸಲ್ಲ ಎಂಬ ನಿರ್ಣಯಕ್ಕೆ ಬರಲಾಗುತ್ತಿಲ್ಲ. ನಿನಗೆ ಶರಣಾಗಿದ್ದೇನೆ. ಶ್ರೇಯಸ್ಸಾದುದನ್ನು ಉಪದೇಶಿಸು ಎಂದು ಕೃಷ್ಣನಲ್ಲಿ ಅಂಗಲಾಚುತ್ತಾನೆ. ಕೆಚ್ಚೆದೆಯ ಕಲಿ ಪಾರ್ಥನಿಗೇಕೆ ಈ ಬವಣೆ? ಆತನೇನಾದರೂ ಕುರುಕ್ಷೇತ್ರದಲ್ಲಿ ನೆರೆದ ಸೇನೆಯನ್ನು ಕಂಡು ಹೆದರಿದನೆ? ಇರಲಿಕ್ಕಿಲ್ಲ. ಈ ಹಿಂದೆ ಧರ್ಮರಾಜನು ಮಾಡಿದ ರಾಜಸೂಯ ಯಾಗದ ಸಂದರ್ಭದಲ್ಲಿ ಕಪ್ಪ ಸಂಗ್ರಹಿಸಲು ಸಾಕಷ್ಟು ರಾಜರನ್ನು ಬಗ್ಗುಬಡಿದು ವಿಜಯಿಯಾದವನಲ್ಲವೇ ಅವನು. ಅಲ್ಲದೇ ಮಹಾಭಾರತ ಯುದ್ಧಕ್ಕೆ ಮುನ್ನ ನಡೆದ ಗೋಗ್ರಹಣ ಯುದ್ಧದಲ್ಲಿ ಏಕಾಂಗಿಯಾಗಿ ಭೀಷದ್ರೋಣ ಕರ್ಣಾದಿಗಳ ವಿರುದ್ಧ ಕಾದಾಡಿ ಹಿಮ್ಮೆಟ್ಟಿಸಿದ್ದ. ಇದೆಲ್ಲದರಿಂದ ಅರ್ಜುನನಿಗೆ ಯುದ್ಧವೆಂದರೆ ಉತ್ಸಾಹದ ತಾಣವೇ ಹೊರತು ಅದು ಅವನಿಗೆ ಎಂದೂ ಭಯಸ್ಥಾನವಾಗಿರಲಿಲ್ಲ. ಎಂಬುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಇಂದೇಕೆ ಧೈರ್ಯ ಅಡಗಿ ಹೋದುದಾದರೂ ಎಲ್ಲಿ? ನ ಯೋತ್ಸ್ಯ ಇತಿ ಗೋವಿಂದಂ ಉಕ್ತ್ವಾ ತೂಷ್ಣೀಂ ಬಭೂವಹ ಕೃಷ್ಣ! ನಾನು ಯುದ್ಧ ಮಾಡಲಾರೆ ಎಂದು ಹೇಳಿ ಗಾಂಡೀವವನ್ನು ಕೆಳಗೆ ಹಾಕಿ ಸುಮ್ಮನೆ ಕುಳಿತುದಾದರೂ ಏಕೆ? ಅರ್ಜುನನ ಈ ದೈನ್ಯತೆಯಿಂದ ಕಲಿಯಬೇಕಾದ ಪಾಠವೇನು? ಇದಕ್ಕೆ ಗೀತೆ ನೀಡುವ ಉತ್ತರವೇನು?
(ನಾಳೆ: ಬದುಕಿಗೆ ಹತ್ತಿರ, ಸಮಸ್ಯೆಗಳಿಗೆ ಗೀತೆಯಲ್ಲಿದೆ ಉತ್ತರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post